ಡಿಕೆಶಿ ಬಳಿಕ ಎಚ್​ಡಿಕೆ ವಿರುದ್ಧ ತೊಡೆ ತಟ್ಟಲು ಕಲ್ಲಡ್ಕ ಪ್ರಭಾಕರ್ ಸಜ್ಜು​; ಇಂದು ರಾಮನಗರದಲ್ಲಿ ಆರ್​ಎಸ್​ಎಸ್​ ಪಥಸಂಚಲನ

ರಾಮನಗರ: ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣ ವಿವಾದವನ್ನು ದಾಳವಾಗಿ ಬಳಸಿಕೊಂಡು ಆರ್ಎಸ್ಎಸ್ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮಾಜಿ ಸಚಿವ ಡಿಕೆ ಶಿವಕುಮಾರ್​​ ಭದ್ರಕೋಟೆ ಕನಕಪುರಕ್ಕೆ ಲಗ್ಗೆ ಇಟ್ಟಿದ್ದರು. ಈಗ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಭದ್ರಕೋಟೆ ರಾಮನಗರದಲ್ಲಿ ಕೇಸರಿ ಬಾವುಟ ಹಾರಿಸಲು ಪ್ರಭಾಕರ್​​ ಭಟ್ ಸಜ್ಜಾಗಿದ್ದಾರೆ.

ಹೌದು, ಇಂದು ರೇಷ್ಮೆ ನಗರಿ ರಾಮನಗರದಲ್ಲಿ ಹಿಂದೂ ಜಾಗರಣಾ ವೇದಿಕೆಯ ಸಹಯೋಗದೊಂದಿಗೆ ಬೃಹತ್​​ ಆರ್​ಎಸ್​​ಎಸ್​ ಪಥಸಂಚಲನ ನಡೆಯಲಿದೆ. ಕಲ್ಲಡ್ಕ ಪ್ರಭಾಕರ್​ ಭಟ್​ ನೇತೃತ್ವದಲ್ಲಿ ಈ ಬೃಹತ್​​ ನಡಿಗೆ ನಡೆಯಲಿದ್ದು, ಇಡೀ ಜಿಲ್ಲೆ ಕೇಸರಿಮಯವಾಗಲಿದೆ. ಮಧ್ಯಾಹ್ನ 2 ಗಂಟೆಯಿಂದ ಪಥಸಂಚಲನ ಪ್ರಾರಂಭವಾಗಲಿದೆ. ಜಿಲ್ಲೆಯ ಮಾಗಡಿ, ಕನಕಪುರ, ಚನ್ನಪಟ್ಟಣ, ರಾಮನಗರ- ಈ ನಾಲ್ಕು ತಾಲೂಕಿನ ಬಿಜೆಪಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

 

ನಗರದ ಪ್ರಮುಖ ರಸ್ತೆಗಳಲ್ಲಿ ಸಾವಿರಾರು ಆರ್​​ಎಸ್​ಎಸ್​ ಮತ್ತು ಬಿಜೆಪಿ ಕಾರ್ಯಕರ್ತರು ಕಾಲ್ನಡಿಗೆಯಲ್ಲಿ ಭಾಗವಹಿಸಲಿದ್ದಾರೆ. ಪಥಸಂಚಲನವು ನಗರದ ಬಾಲಗೇರಿ, ಟೌನ್ ಪೊಲೀಸ್ ಠಾಣೆ, ಕೆಂಪೇಗೌಡ ವೃತ್ತ, ಐಜೂರು ವೃತ್ತ, ಬಂಡಿಮಾಂಕಾಳಮ್ಮ ದೇವಸ್ಥಾನ ವೃತ್ತದ ಮಾರ್ಗವಾಗಿ ಕಾಮಗಗುಡಿ ಸರ್ಕಲ್ ನಿಂದ ಜಿಲ್ಲಾ ಕ್ರೀಡಾಂಗಣ ತಲುಪಲಿದೆ.  ಸಂಜೆ 4.30ಕ್ಕೆ ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ದಿಕ್ಸೂಚಿ ಭಾಷಣ ಮಾಡಲಿದ್ಧಾರೆ.

ಈ ಪಥಸಂಚಲನದಲ್ಲಿ 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ.  ರಾಮನಗರದ ಬಿಜೆಪಿ ಕಾರ್ಯಕರ್ತರು ಸಹ ಆರ್​ಎಸ್​ಎಸ್​ ಪಥಸಂಚಲದಲ್ಲಿ ಪಾಲ್ಗೊಳ್ಳಲಿದ್ಧಾರೆ. ಆರ್​ಎಸ್​ಎಸ್​ ಮತ್ತು ಬಿಜೆಪಿ ಕಾರ್ಯಕರ್ತರು ಖಾಕಿ ಪ್ಯಾಂಟು, ಬಿಳಿ ಶರ್ಟು, ಕಪ್ಪು ಟೋಪಿ ಧರಿಸಿ, ಕೈಯಲ್ಲಿ ಲಾಠಿ ಹಿಡಿದು ಕಾಲ್ನಡಿಗೆ ನಡೆಯಲಿದ್ದಾರೆ.  ಚನ್ನಪಟ್ಟಣ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಸಹ ಪಥಸಂಚಲನದಲ್ಲಿ ಭಾಗಿಯಾಗಲಿದ್ದಾರೆ.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಒಂದು ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ರಾಮನಗರ ಜೊತೆಗೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಆನೇಕಲ್ ನಿಂದಲೂ ಪೊಲೀಸರು ಆಗಮಿಸಿದ್ದಾರೆ. ಜಿಲ್ಲೆಯ ಎಲ್ಲಾ ಪೊಲೀಸರು ಇಂದು ರಾಮನಗರದಲ್ಲಿ ಮೊಕ್ಕಾಂ ಹೂಡಿದ್ದಾರೆ.

2023ರ ವಿಧಾನಸಭೆ ಚುನಾವಣೆಯನ್ನು ಟಾರ್ಗೆಟ್ ಇಟ್ಟುಕೊಂಡು ರಾಮನಗರದಲ್ಲಿ ತಂತ್ರಗಾರಿಕೆ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಡಿಕೆಶಿ ಬಳಿಕ ಕುಮಾರಸ್ವಾಮಿ ವಿರುದ್ಧ ತೊಡೆ ತಟ್ಟಲು ಕಲ್ಲಡ್ಕ ಪ್ರಭಾಕರ್​ ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ