ನವದೆಹಲಿ: ರಾಷ್ಟ್ರೀಯ ನಾಗರಿಕ ನೋಂದಣಿ ಮತ್ತು ಪೌರತ್ವ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಈ ಮಧ್ಯೆಯೇ ದೆಹಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಈಗಾಗಲೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ತನ್ನ ಅಭಿವೃದ್ದಿ ಕೆಲಸಗಳನ್ನು ಮುಂದಿಟ್ಟುಕೊಂಡು ಅಬ್ಬರದ ಪ್ರಚಾರ ಮಾಡಿದೆ. ಹಾಗೆಯೇ ಇಲ್ಲಿನ ವಿಧಾನಸಭೆ ಚುನಾವಣೆ ಗೆಲ್ಲಲು ಕಾಂಗ್ರೆಸ್ನಂತೆಯೇ ಬಿಜೆಪಿ ಕೂಡ ಕಸರತ್ತು ನಡೆಸುತ್ತಿದೆ. ಸಿಎಂ ಅರವಿಂದ್ ಕೇಜ್ರಿವಾಲ್ ಸೋಲಿಸಲು ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಬಿಜೆಪಿ ಪರ ಮತಯಾಚನೆ ಮಾಡಿರುವುದು ಮಾತ್ರ ಗಮನಾರ್ಹ. ನಿನ್ನೆಗೆ ದೆಹಲಿ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರ ಕೊನೆಯಾಗಿದೆ. ವಿಭಿನ್ನ ಪ್ರಚಾರ, ವಿಶಿಷ್ಟ ಕಾರ್ಯತಂತ್ರ ಮತ್ತು ವಿಕೃತಗಳಿಂದ ಕೂಡಿದ ಚುನಾವಣೆ ಇದಾಗಿದೆ. ಇನ್ನೇನಿದ್ದರೂ ಮನಮನೆಗೆ ಭೇಟಿ ನೀಡಿ ಮತಬೇಟೆ ಮಾಡಬೇಕಿದೆ.
ಆರಂಭದಿಂದಲೂ ಆಮ್ ಆದ್ಮಿ ಪಾರ್ಟಿಯ ಚುನಾವಣಾ ರಂಣತಂತ್ರಗಳನ್ನು ನಗಣ್ಯ ಎಂದುಕೊಂಡಿದ್ದ ರಾಷ್ಟ್ರೀಯ ಪಕ್ಷಗಳು, ಈ ಬಾರಿ ಅವರದ್ದೇ ಪಕ್ಷದ ಸೂತ್ರಗಳನ್ನು ಅಳವಡಿಸಿಕೊಳ್ಳುತ್ತಿವೆ. ದೇಶಾದ್ಯಂತ ಬಿಜೆಪಿಯ ಚುನಾವಣಾ ತಂತ್ರಗಳನ್ನು ಇತರೆ ಪಕ್ಷಗಳು ಹಿಂಬಾಲಿಸುತ್ತಿದ್ದವು. ಈಗ ಅದೇ ಬಿಜೆಪಿ ದೆಹಲಿಯಲ್ಲಿ ತದ್ವಿರುದ್ದ ಎನ್ನುವಂತೆ ಆಪ್ನ ಮೊಹಲ್ಲಾ ಮೀಟಿಂಗ್ ಸೇರಿದಂತೆ ಹಲವು ಕಾರ್ಯತಂತ್ರಗಳನ್ನು ಹಿಂಬಾಲಿಸುತ್ತಿದೆ.
ಆರಂಭದಿಂದಲೂ ಆಮ್ ಆದ್ಮಿ ಪಾರ್ಟಿಯ ಚುನಾವಣಾ ರಂಣತಂತ್ರಗಳನ್ನು ನಗಣ್ಯ ಎಂದುಕೊಂಡಿದ್ದ ರಾಷ್ಟ್ರೀಯ ಪಕ್ಷಗಳು, ಈ ಬಾರಿ ಅವರದ್ದೇ ಪಕ್ಷದ ಸೂತ್ರಗಳನ್ನು ಅಳವಡಿಸಿಕೊಳ್ಳುತ್ತಿವೆ. ದೇಶಾದ್ಯಂತ ಬಿಜೆಪಿಯ ಚುನಾವಣಾ ತಂತ್ರಗಳನ್ನು ಇತರೆ ಪಕ್ಷಗಳು ಹಿಂಬಾಲಿಸುತ್ತಿದ್ದವು. ಈಗ ಅದೇ ಬಿಜೆಪಿ ದೆಹಲಿಯಲ್ಲಿ ತದ್ವಿರುದ್ದ ಎನ್ನುವಂತೆ ಆಪ್ನ ಮೊಹಲ್ಲಾ ಮೀಟಿಂಗ್ ಸೇರಿದಂತೆ ಹಲವು ಕಾರ್ಯತಂತ್ರಗಳನ್ನು ಹಿಂಬಾಲಿಸುತ್ತಿದೆ.
ಹಾಗಾಗಿಯೇ ಆಪ್ನ ವಿಧಾನವನ್ನೇ ಬಿಜೆಪಿಯೂ 2020ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅನುಸರಿಸುತ್ತಿದೆ. ಇಂದು ಮನೆ ಮನೆ ಪ್ರಚಾರಕ್ಕೆ ರಾಜ್ಯ ಚುನಾವಣಾ ಆಯೋಗ ಅವಕಾಶ ನೀಡಿದ್ದು, ವಿಜೃಂಭಣೆಯ ಪ್ರಚಾರಕ್ಕಿಂತ ಮೊಹಲ್ಲಾ ಮೀಟಿಂಗ್ ಸೂಕ್ತ ಎಂದು ಭಾವಿಸಿದೆ. ಆದ್ದರಿಂದಲೇ ಮನೆಮನೆಗೆ ತೆರಳಿ ಪ್ರಚಾರ ನಡೆಸಲು ನಿರ್ಧರಿಸಿದೆ. ಕಾಂಗ್ರೆಸ್ ಕೂಡ ಬಹಿರಂಗ ರ‍್ಯಾಲಿಗಳಿಗಿಂತ ಚಿಕ್ಕಚಿಕ್ಕ ಮೊಹಲ್ಲಾ ಸಭೆಗಳೇ ಪರಿಣಾಮಕಾರಿ ಎಂಬ ತೀರ್ಮಾನಕ್ಕೆ ಬಂದಿದೆ. ಹೀಗಾಗಿ ಇಂದು ಚುನಾವಣಾ ಕಣದಲ್ಲಿರುವ ಮೂರು ಪಕ್ಷದ ಅಭ್ಯರ್ಥಿಗಳು ಮನೆಮನೆ ಪ್ರಚಾರ ಮಾಡಲಿದ್ದಾರೆ.
ದೆಹಲಿಯ ಆರನೇ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಫೆಬ್ರವರಿ 8ರಂದು ಅಂದರೆ ನಾಳೆಯೇ ಏಕ ಹಂತದಲ್ಲಿ ಚುನಾವಣೆ ನಡೆಯಲಿದೆ. ಫೆ. 11ರಂದು ಮತ ಎಣಿಕೆ ಆಗಲಿದೆ.
ಇಲ್ಲಿನ ವಿಧಾನಸಭೆ 70 ಸದಸ್ಯರ ಬಲ ಹೊಂದಿದೆ. 2015ರಲ್ಲಿ ನಡೆದ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷ ಬರೋಬ್ಬರಿ 67 ಸ್ಥಾನಗಳನ್ನು ಗೆದ್ದು ಬಹುತೇಕ ಕ್ಲೀನ್ ಸ್ವೀಪ್ ಮಾಡಿತ್ತು. ಅದಕ್ಕೂ ಹಿಂದೆ 2013ರಲ್ಲಿ ನಡೆದ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿತ್ತು. ಬಿಜೆಪಿ 31, ಆಪ್ ಪಕ್ಷ 28 ಹಾಗೂ ಕಾಂಗ್ರೆಸ್ 8 ಸ್ಥಾನ ಗಳಿಸಿದ್ದವು. ಬಿಜೆಪಿ ಸರ್ಕಾರ ರಚಿಸಲು ಮುಂದೆ ಬರಲಿಲ್ಲ. ರಾಷ್ಟ್ರಪತಿ ಆಳ್ವಿಕೆ ಸನ್ನಿಹಿತ ಎಂದನಿಸುತ್ತಿರುವಂತೆಯೇ ಕಾಂಗ್ರೆಸ್ ಪಕ್ಷದ ಬಾಹ್ಯ ಬೆಂಬಲದೊಂದಿಗೆ ಆಮ್ ಆದ್ಮಿ ಅಧಿಕಾರ ರಚಿಸಿತ್ತು. ಕೆಲವೇ ತಿಂಗಳ ಹಿಂದಷ್ಟೇ ಜನ್ಮತಾಳಿದ್ದ ಆಮ್ ಆದ್ಮಿ ಪಕ್ಷ ಒಂದೇ ವರ್ಷದ ಅಂತರದಲ್ಲಿ ರಾಜ್ಯವೊಂದರ ಅಧಿಕಾರ ಹಿಡಿದು ಹೊಸ ಇತಿಹಾಸ ಸೃಷ್ಟಿಸಿತು. ಅರವಿಂದ್ ಕೇಜ್ರಿವಾಲ್ ದಿಲ್ಲಿ ‘ದೊರೆ’ಯಾದರು.