
ವಾಷಿಂಗ್ಟನ್: ಭಾರತದ ಆರ್ಥಿಕತೆ ಅಧಃಪತನದತ್ತ ಸಾಗುತ್ತಿದೆ. ಅತೀವ ಆರ್ಥಿಕ ಹಿಂಜರಿತ ಕಾಡುತ್ತಿದೆ ಎಂದು ಕೇಳಬರುತ್ತಿರುವ ವಿಮರ್ಶೆಗಳನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ತಳ್ಳಿಹಾಕಿದೆ. 2019ರಲ್ಲಿ ಭಾರತದಲ್ಲಿ ದಿಢೀರ್ ಆರ್ಥಿಕ ಹಿನ್ನಡೆಗೆ ಆರ್ಥಿಕ ಹಿಂಜರಿತ ಕಾರಣ ಅಲ್ಲ ಎಂದು ಐಎಂಎಫ್ನ ನಿರ್ವಾಹಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿಯೆವಾ ಸ್ಪಷ್ಟಪಡಿಸಿದ್ದಾರೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿನ ಬಿಕ್ಕಟ್ಟು ಹಾಗೂ ಸುಧಾರಣಾ ಕ್ರಮಗಳಾದ ನೋಟು ಅಪಮೌಲ್ಯ, ಜಿಎಸ್ಟಿ ಮೊದಲಾದವುಗಳು ದಿಢೀರ್ ಆರ್ಥಿಕ ಕುಸಿತಕ್ಕೆ ಕಾಣವಾಗಿದೆ ಎಂದು ಜಾರ್ಜಿಯೆವಾ ಅಭಿಪ್ರಾಯಪಟ್ಟಿದ್ಧಾರೆ.
“ಭಾರತದ ಆರ್ಥಿಕತೆ 2019ರಲ್ಲಿ ದಿಢೀರ್ ಹಿನ್ನಡೆ ಅನುಭವಿಸಿದ್ದು ಹೌದು. ಕಳೆದ ವರ್ಷದ ಅಭಿವೃದ್ಧಿ ಅಂದಾಜನ್ನು ನಾವು ಶೇ. 4ಕ್ಕೆ ಇಳಿಸಬೇಕಾಯಿತು. 2020ರಲ್ಲಿ ಶೇ. 5.8ರಷ್ಟು ಅಭಿವೃದ್ಧಿ ಆಗಬಹುದು. 2021ರಲ್ಲಿ ಇನ್ನೂ ಮೇಲಕ್ಕೆ ಹೋಗಿ ಶೇ. 6.5 ರಷ್ಟು ಪ್ರಗತಿ ಹೊಂದಬಹುದು ಎಂದು ನಿರೀಕ್ಷೆ ಇಟ್ಟುಕೊಂಡಿದ್ದೇವೆ” ಎಂದು ಇಲ್ಲಿ ಸುದ್ದಿಗಾರರಿಗೆ ಐಎಂಎಫ್ ಅಧಿಕಾರಿ ತಿಳಿಸಿದ್ಧಾರೆ.
ಭಾರತ ಸರ್ಕಾರ ತೆಗೆದುಕೊಂಡಿರುವ ನೋಟ್ ಬ್ಯಾನ್ ಮತ್ತು ಜಿಎಸ್ಟಿಯಂತಹ ಸುಧಾರಣಾ ಕ್ರಮಗಳು ತಾತ್ಕಾಲಿಕವಾಗಿ ಆರ್ಥಿಕತೆಗೆ ಹಾನಿ ಮಾಡಿರಬಹುದಾದರೂ ದೂರಗಾಮಿಯಾಗಿ ಅನುಕೂಲ ಮಾಡಿಕೊಡಬಹುದು ಎಂದು ಹೇಳಿದ್ಧಾರೆ.
ಭಾರತದಲ್ಲಿ ಅನುಭೋಗ(consumption) ಕಡಿಮೆಗೊಂಡಿದೆ. ಇದರಿಂದಾಗಿ ಆರ್ಥಿಕತೆಗೆ ಒಟ್ಟಾರೆಯಾಗಿ ಹಿನ್ನಡೆಯಾಗುವಂತೆ ಮಾಡಿದೆ. ಇದು ದಿಢೀರ್ ಹಿನ್ನಡೆಯೇ ಹೊರತು ಭಾರತದಲ್ಲಿ ಎಕನಾಮಿ ರಿಸಿಶನ್ ಇಲ್ಲ. ಮಧ್ಯಮಾವಧಿಯಲ್ಲಿ ಭಾರತದಲ್ಲಿ ಉತ್ತಮ ಆರ್ಥಿಕ ಪ್ರಗತಿ ಕಾಣುವ ಅವಕಾಶಗಳಿವೆ ಎಂದು ಎಎಂಎಫ್ನ ಎಂಡಿ ಕ್ರಿಸ್ಟಲಿನಾ ಜಾರ್ಜಿಯೆವಾ ತಿಳಿಸಿದ್ದಾರೆ.
ಬಜೆಟ್ಗೆ ಅಗತ್ಯವಿರುವಷ್ಟು ಆದಾಯ ಇಲ್ಲದಿರುವುದು ಹಣಕಾಸು ಸಚಿವರಿಗೆ ತಿಳಿದಿರುವಂಥದ್ದೆ. ಹಣಕಾಸು ಸ್ಥಿತಿ ಭದ್ರಗೊಳಿಸಬೇಕಾದರೆ ಆದಾಯ ಸಂಗ್ರಹ ಹೆಚ್ಚಿಸಬೇಕಾಗುತ್ತದೆ. ಬಜೆಟ್ನಲ್ಲಿ ಹೆಚ್ಚು ವೆಚ್ಚ ಮಾಡಲು ಕಷ್ಟವಾಗಬಹುದು. ಆದರೆ, ಆದಾಯ ಸಂಗ್ರ ಹೆಚ್ಚಿಸಲು ಅವಕಾಶವಿದೆ ಎಂದು ಕ್ರಿಸ್ಟಲಿನಾ ಅಭಿಪ್ರಾಯಪಟ್ಟಿದ್ಧಾರೆ.
ಭಾರತದಲ್ಲಿ 2019ರಲ್ಲಿ ಶೇ. 5ರಷ್ಟು ಮಾತ್ರ ಆರ್ಥಿಕ ಅಭಿವೃದ್ಧಿ ಆಗಿರಬಹುದು ಎಂದು ಅಂದಾಜಿಸಲಾಗಿದೆ. ದಶಕದ ಬಳಿಕ ಇದು ಅತ್ಯಂತ ಕಡಿಮೆ ಜಿಡಿಪಿ ಅಭಿವೃದ್ಧಿ ದರ ಎನಿಸಿದೆ. ನೋಟು ಅಪಮೌಲ್ಯ, ಜಿಎಸ್ಟಿಯಂಥ ಕ್ರಮಗಳಿಂದಾಗಿ ಅರ್ಥ ವ್ಯವಸ್ಥೆ ಕುಸಿದಿದೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೀನಾಯ ಪರಿಸ್ಥಿತಿಗೆ ಎಡೆ ಮಾಡಿಕೊಡುತ್ತದೆ ಎಂದು ವಿಪಕ್ಷಗಳು ಹೇಳುತ್ತಲೇ ಬಂದಿವೆ. 500 ಮತ್ತು 1,000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ನೋಟುಅಪಮೌಲ್ಯ ಕ್ರಮದಿಂದಾಗಿ ಅಸಂಘಟಿತ ಮತ್ತು ಅನಧಿಕೃತ ವಲಯಗಳ ಉದ್ಯಮಗಳಿಗೆ ಹೊಡೆತ ಬಿದ್ದಿದೆ. ರಿಯಲ್ ಎಸ್ಟೇಟ್ ಉದ್ಯಮಕ್ಕೆ ಏಟು ಬಿದ್ದಿದೆ ಎಂದು ಹೇಳಲಾಗುತ್ತಿದೆ. ತಯಾರಿಕೆ ಸೇರಿದಂತೆ ಅನೆಕ ಕ್ಷೇತ್ರಗಳಲ್ಲಿ ಉದ್ಯಮಗಳು ನಷ್ಟಗೊಂಡು ಬಾಗಿಲು ಮುಚ್ಚುತ್ತಿವೆ. ತತ್ಪರಿಣಾಮವಾಗಿ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆ. ಸರ್ಕಾರ ಸರಿಯಾದ ರೀತಿಯಲ್ಲಿ ಸುಧಾರಣಾ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮನಮೋಹನ್ ಸಿಂಗ್, ಪಿ. ಚಿದಂಬರಂ ಸೇರಿದಂತೆ ಅನೇಕರು ಆರೋಪಿಸುತ್ತಿದ್ದಾರೆ.