ನವದೆಹಲಿ: ಫೆಬ್ರವರಿ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆ.23 ರಂದು ಗುಜರಾತಿನ ಅಹಮದಾಬಾದ್ ನಗರಕ್ಕೆ ಆಗಮಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ. ಅಲ್ಲದೆ, ಸಾಬರ ನದಿ ದಡಕ್ಕೂ ತೆರಳಿ ನದಿಯ ಹರಿವನ್ನು ವೀಕ್ಷಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ನ್ಯೂಸ್ 18ಗೆ ತಿಳಿಸಿವೆ.
ಅಮೆರಿಕದ ಅಧ್ಯಕ್ಷರಾದ ನಂತರ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲ ಬಾರಿ. ಟ್ರಂಪ್ ಫೆಬ್ರವರಿಯಲ್ಲಿ ಭಾರತ ಪ್ರವಾಸ ಕೈಗೊಳ್ಳುವುದು ಬಹುತೇಕ ಖಚಿತ. ಆದರೆ, ನಿರ್ದಿಷ್ಟವಾಗಿ ಯಾವ ದಿನ ಭಾರತಕ್ಕೆ ಆಗಮಿಸಲಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲ. ಭಾರತ ಮತ್ತು ಅಮೆರಿಕ ಈ ಭೇಟಿಯ ದಿನಾಂಕವನ್ನು ಸಕ್ರೀಯವಾಗಿ ಚರ್ಚಿಸುತ್ತಿವೆ. ಈ ನಡುವೆ ಫೆ.23 ರಂದು ಅಹಮದಾಬಾದ್ಗೆ ಬಂದಿಳಿಯುವ ಹಾಗೂ ಗುಜರಾತಿನ ಸಾಬರಮತಿ ನದಿಯನ್ನು ವೀಕ್ಷಣೆ ಮಾಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಗುರುವಾರ ಉತ್ತರ ದೆಹಲಿಯ ಶಾಸ್ತ್ರಿ ನಗರದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿರುವ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ, “ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಭಾರತ ಪ್ರವಾಸದ ಸಂದರ್ಭದಲ್ಲಿ ಸಾಬರಮತಿ ನದಿಯ ಮುಂಭಾಗಕ್ಕೆ ಆಗಮಿಸುವುದು ಖಚಿತ” ಎಂದು ತಿಳಿಸಿದ್ದಾರೆ.
ಅಲ್ಲದೆ, ಸಬರಮತಿ ನದಿಯ ಕುರಿತು ಮಾತನಾಡಿದ ಅವರು, “ಇಡೀ ಏಷ್ಯಾದಲ್ಲೇ ಸಬರಮತಿ ಅತ್ಯಂತ ಸ್ವಚ್ಚವಾದ ನದಿಯಾಗಿ ಮಾರ್ಪಟ್ಟಿದೆ. ಈ ವಿಚಾರವನ್ನು ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿಯೇ ಖಚಿತ ಪಡಿಸಿದ್ದಾರೆ. ಜಪಾನ್ ಮತ್ತು ಇಸ್ರೇಲ್ ಪ್ರಧಾನ ಮಂತ್ರಿಗಳಂತಹ ಪ್ರಮುಖ ನಾಯಕರೂ ಸಹ ನದಿಯ ಮುಂಭಾಗಕ್ಕೆ ಭೇಟಿ ನೀಡಿ ಆಶ್ಚರ್ಯಚಕಿತರಾಗಿದ್ದಾರೆ” ಎಂದು ಹೇಳಿದ್ದಾರೆ.
ಕಳೆದ ವರ್ಷ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಡೊನಾಲ್ಡ್ ಟ್ರಂಪ್ ಅವರನ್ನು ಆಹ್ವಾನಿಸಲಾಗಿತ್ತು. ಆದರೆ, ವೇಳಾಪಟ್ಟಿ ಸಮಸ್ಯೆಗಳಿಂದಾಗಿ ಅಮೆರಿಕ ಅಧ್ಯಕ್ಷ ಭಾರತಕ್ಕೆ ಭೇಟಿ ನೀಡುವುದು ಸಾಧ್ಯವಾಗಿರಲಿಲ್ಲ. ಈ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ 2015ರಲ್ಲಿ ಭಾರತಕ್ಕೆ ಗಣರಾಜ್ಯೋತ್ಸವ ಸಂದರ್ಭದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿ ಗಮನ ಸೆಳೆದಿದ್ದರು.