ನವ ದೆಹಲಿ; ಮಹಾತ್ಮ ಗಾಂಧಿಯನ್ನು ಕೊಂದ ಕೊಲೆಗಾರ ನಾಥೂರಾಮ್ ಗೋಡ್ಸೆ ಮತ್ತು ಪ್ರಧಾನಿ ನರೇಂದ್ರ ಮೋದಿ ಈ ಇಬ್ಬರೂ ಒಂದೇ ಸಿದ್ಧಾಂತದಲ್ಲಿ ನಂಬಿಕೆ ಇಟ್ಟವರು. ಆದರೆ, ಇಬ್ಬರ ನಡುವಿನ ಏಕೈಕ ವ್ಯತ್ಯಾಸ ಎಂದರೆ ನಾನು ಗೋಡ್ಸೆಯನ್ನು ನಂಬುತ್ತೇನೆ ಎಂದು ಹೇಳುವ ಧೈರ್ಯ ನರೇಂದ್ರ ಮೋದಿಗೆ ಇಲ್ಲ ಎಂದು ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಇಂದು ವಾಗ್ದಾಳಿ ನಡೆಸಿದ್ದಾರೆ.
ಕೇರಳದ ವಯನಾಡ್ ಜಿಲ್ಲೆಯಲ್ಲಿ ಗುರುವಾರ ನಡೆದ ಸಿಎಎ ವಿರೋಧಿ ರ‍್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿರುವ ರಾಹುಲ್ ಗಾಂಧಿ, “ಈ ವಿಚಾರ ನಿಮಗೆ ತಿಳಿದಿದೆಯೋ? ಇಲ್ಲವೋ? ನನಗೆ ಗೊತ್ತಿಲ್ಲ. ಆದರೆ, ನಾಥೂರಾಮ ಗೋಡ್ಸೆ ಮಹಾತ್ಮ ಗಾಂಧಿಯ ಮೇಲೆ ಗುಂಡುಹಾರಿಸಿದ್ದಾಗ ಆತ ತನ್ನ ಕಣ್ಣನ್ನು ಮುಚ್ಚಿದ್ದ. ಏಕೆಂದರೆ ಆತನಿಗೆ ತಾನು ಏನು ಮಾಡುತ್ತಿದ್ದೇನೆ ಎಂಬುದು ತಿಳಿದಿತ್ತು. ಗೋಡ್ಸೆ ಮತ್ತು ನರೇಂದ್ರ ಮೋದಿ ಇಬ್ಬರದ್ದೂ ಒಂದೇ ಸಿದ್ಧಾಂತ. ಆದರೆ, ನಾನು ಗೋಡ್ಸೆಯನ್ನು ನಂಬುತ್ತೇನೆ ಎಂದು ಬಹಿರಂಗವಾಗಿ ಹೇಳುವ ಧೈರ್ಯ ಮೋದಿ ಇಲ್ಲವಷ್ಟೆ” ಎಂದು ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕೇರಳದ ವಯನಾಡ್ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರು ಇಂದು ದೊಡ್ಡ ಮಟ್ಟದ ಸಾಮೂಹಿಕ ಪ್ರತಿಭಟನಾ ರ‍್ಯಾಲಿಯನ್ನು ಹಮ್ಮಿಕೊಂಡಿದ್ದರು. ಇಲ್ಲಿನ ಎಸ್ಕೆಎಂಜೆ ಪ್ರೌಢ ಶಾಲೆಯಿಂದ ಆರಂಭವಾದ ಮೆರವಣಿಗೆ ಎರಡು ಕಿಲೋ ಮೀಟರ್ವರೆಗೆ ಕ್ರಮಿಸಿತ್ತು. ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದ ನೂರಾರು ಕಾರ್ಮಿಕರು ಮೆರವಣಿಗೆಯ ಉದ್ದಕ್ಕೂ “ಸಂವಿಧಾನ ಉಳಿಸಿ” ಎಂದು ಘೊಷವಾಕ್ಯ ಕೂಗಿದರು.
ರಾಹುಲ್ ಗಾಂಧಿ ಅವರ ಸ್ವಕ್ಷೇತ್ರವೂ ಆಗಿರುವ ವಯನಾಡ್ನಲ್ಲಿ ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ ಕೇರಳ ವಿಧಾನಸಭೆ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿಥಾಲಾ, ಕೇರಳ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.