ಗ್ರಾಹಕರಿಗೆ ಗುಡ್ ನ್ಯೂಸ್; ಶೀಘ್ರದಲ್ಲೇ ತರಕಾರಿ ದರ ಇಳಿಕೆ ಸಾಧ್ಯತೆ!

ನವದೆಹಲಿ: ನಿತ್ಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದ ಸಾರ್ವಜನಿಕರಿಗೆ ಸಂತಸದ ಸುದ್ದಿಯೊಂದು ಬಂದಿದೆ. ಭಾರತೀಯ ಅಡುಗೆಮನೆಯ ಮುಖ್ಯ ತರಕಾರಿಗಳಾದ ಟೊಮ್ಯಾಟೊ, ಆಲೂಗಡ್ಡೆ ಮತ್ತು ಈರುಳ್ಳಿ ಉತ್ತಮ ಇಳುವರಿ ಪಡೆಯುತ್ತಿದೆ. ಕೃಷಿ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, 2019-20ರಲ್ಲಿ ಟೊಮೆಟೊ, ಆಲೂಗಡ್ಡೆ ಮತ್ತು ಈರುಳ್ಳಿ ಉತ್ಪಾದನೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಈ ಮೂರು ತರಕಾರಿಗಳ ಬೆಲೆ ಶೀಘ್ರದಲ್ಲೇ ಕಡಿಮೆಯಾಗುವ ನಿರೀಕ್ಷೆಯಿದೆ. ಕುತೂಹಲಕಾರಿ ಸಂಗತಿಯೆಂದರೆ, 2018-19ಕ್ಕೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಉತ್ತಮ ಇಳುವರಿಯ ನಿರೀಕ್ಷೆಯಿದೆ.

ಇಳುವರಿಯ ಹೊರತಾಗಿಯೂ ಟೊಮೆಟೊ, ಆಲೂಗಡ್ಡೆ ಮತ್ತು ಈರುಳ್ಳಿ ಏಕೆ ದುಬಾರಿಯಾಗಿದೆ?
ಈ ವರ್ಷ, ಕೃಷಿ ಸಚಿವಾಲಯವು 2019-20ರಲ್ಲಿ ಟೊಮೆಟೊ, ಆಲೂಗಡ್ಡೆ ಮತ್ತು ಈರುಳ್ಳಿಯ ಉತ್ತಮ ಇಳುವರಿ ನಿರೀಕ್ಷಿಸಲಾಗಿದೆ ಎಂದು ಮುನ್ಸೂಚನೆ ನೀಡಿದೆ. ಈ ವರ್ಷ ಬಿಡುಗಡೆಯಾದ ಅಂಕಿಅಂಶಗಳ ಪ್ರಕಾರ, ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಈರುಳ್ಳಿ ಇಳುವರಿ 7 ಪ್ರತಿಶತ, ಆಲೂಗೆಡ್ಡೆ ಇಳುವರಿ 3.49 ಮತ್ತು ಟೊಮೆಟೊ ಇಳುವರಿ 1.68 ರಷ್ಟು ಹೆಚ್ಚಾಗಬಹುದು. ಉತ್ತಮ ಇಳುವರಿಯ ಅಂದಾಜಿನ ಹೊರತಾಗಿಯೂ, ಈ ಮೂರು ತರಕಾರಿಗಳ ಬೆಲೆಯನ್ನು ಕಡಿಮೆ ಮಾಡದಿರಲು ಮುಖ್ಯ ಕಾರಣ ಪೂರೈಕೆ ಎಂದು ತಜ್ಞರು ಹೇಳುತ್ತಾರೆ. ವಾಸ್ತವವಾಗಿ, ಹೆಚ್ಚಿನ ಮಂಡಿಗಳಲ್ಲಿ, ಈ ಮೂರು ತರಕಾರಿಗಳು ಸಮಯಕ್ಕೆ ಸರಿಯಾಗಿ ತಲುಪದ ಕಾರಣ ಇವುಗಳ ಬೆಲೆಗಳು ಇನ್ನೂ ಕೂಡ ಕಡಿಮೆಯಾಗಿಲ್ಲ ಎಂದು ಹೇಳಲಾಗಿದೆ.

ಮುಂದಿನ ದಿನಗಳಲ್ಲಿ ಬೆಲೆ ಇಳಿಕೆ:
ಉತ್ತಮ ಇಳುವರಿಯ ಮಧ್ಯೆ ಮುಂದಿನ ದಿನಗಳಲ್ಲಿ ಈ ತರಕಾರಿಗಳ ಬೆಲೆ ಕುಸಿಯುವ ನಿರೀಕ್ಷೆಯಿದೆ ಎಂದು ತಜ್ಞರು ಹೇಳುತ್ತಾರೆ. ಈ ಹಿಂದೆ ದೇಶದ ವಿವಿಧ ಮಾರುಕಟ್ಟೆಗಳಲ್ಲಿ ಈರುಳ್ಳಿ ಪ್ರತಿ ಕೆ.ಜಿ.ಗೆ 150 ರೂ. ತಲುಪಿತ್ತು. ಈರುಳ್ಳಿ ಬೆಲೆ ನಿಗ್ರಹಿಸಲು ಸರ್ಕಾರ ಈರುಳ್ಳಿ ಆಮದು ಮಾಡಿಕೊಂಡಿತ್ತು. ಆದರೆ ಇದು ಕಾರ್ಯರೂಪಕ್ಕೆ ಬರಲಿಲ್ಲ. ಪ್ರಸಕ್ತ ಹಣಕಾಸು ವರ್ಷದಲ್ಲಿ ಎಲ್ಲಾ ಮೂರು ತರಕಾರಿಗಳ ಇಳುವರಿಯನ್ನು ಸರ್ಕಾರ ಹೆಚ್ಚಿಸುವ ನಿರೀಕ್ಷೆಯಿದೆ. ಒಂದೊಮ್ಮೆ ಇದು ಸಂಭವಿಸಿದಲ್ಲಿ ಶೀಘ್ರವೇ ಟೊಮ್ಯಾಟೋ, ಆಲೂಗಡ್ಡೆ ಮತ್ತು ಈರುಳ್ಳಿ ದರಗಳು ಇಳಿಕೆಯಾಗುವ ನಿರೀಕ್ಷೆಯಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ