ನವದೆಹಲಿ: ಭಾರತ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಕಾಶ್ಮೀರದಲ್ಲಿ ವಿಧಿಸಿರುವ ನಿರ್ಬಂಧಗಳನ್ನು ಪ್ರಶ್ನಿಸಿ ಐರೋಪ್ಯ ಜನಪ್ರತಿನಿಧಿಗಳ ವಿವಿಧ ಗುಂಪುಗಳು ಬರೋಬ್ಬರಿ 6 ನಿರ್ಣಯಗಳನ್ನು ಹೊರಡಿಸಿವೆ. ಈ ಮೂಲಕ ಭಾರತದ ಮೇಲೆ ಅಂತಾರಾಷ್ಟ್ರೀಯ ಒತ್ತಡ ಹೇರಲಾಗಿದೆ. ಮಾರ್ಚ್ ತಿಂಗಳಲ್ಲಿ ಭಾರತ ಮತ್ತು ಐರೋಪ್ಯ ಒಕ್ಕೂಟದ ಮಧ್ಯೆ ಶೃಂಗಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿರುವುದು ಕೂತೂಹಲ ಮೂಡಿಸಿದೆ.
ಯೂರೋಪಿಯನ್ ಯೂನಿಯನ್ ಪಾರ್ಲಿಮೆಂಟ್ನಲ್ಲಿರುವ 751 ಸದಸ್ಯರ ಪೈಕಿ ವಿವಿಧ ಗುಂಪುಗಳಿಗೆ ಸೇರಿದ 600ಕ್ಕೂ ಹೆಚ್ಚು ಸಂಸದರು ಆರು ನಿರ್ಣಯಗಳನ್ನ ಹೊರಡಿಸಿದ್ಧಾರೆ. ಭಾರತದ ಪೌರತ್ವ ಕಾಯ್ದೆಯಿಂದ ವಿಶ್ವದಲ್ಲೇ ಅತಿ ದೊಡ್ಡ ಪೌರತ್ವ ಬಿಕ್ಕಟ್ಟು ಸೃಷ್ಟಿಯಾಗುತ್ತದೆ ಎಂದು ಈ ಸಂಸದರು ಆತಂಕ ವ್ಯಕ್ತಪಡಿಸಿದ್ದಾರೆ.
ನಿರ್ಣಯ ಹೊರಡಿಸಿದ ಆರು ಐರೋಪ್ಯ ಗುಂಪುಗಳು:
1) ಪ್ರೋಗ್ರೆಸ್ಸಿವ್ ಅಲಾಯನ್ಸ್ ಆಫ್ ಸೋಷಿಯಲಿಸ್ಟ್ಸ್ ಆ್ಯಂಡ್ ಡೆಮೋಕ್ರಾಟ್ಸ್ – 154 ಸದಸ್ಯರು
2) ಯೂರೋಪಿಯನ್ ಪೀಪಲ್ಸ್ ಪಾರ್ಟಿ (ಕ್ರಿಶ್ಚಿಯನ್ ಡೆಮಾಕ್ರಾಟ್ಸ್) – 182 ಸದಸ್ಯರು
3) ಯೂರೋಪಿಯನ್ ಯುನೈಟೆಡ್ ಲೆಫ್ಟ್ ಆ್ಯಂಡ್ ನಾರ್ಡಿಕ್ ಗ್ರೀನ್ ಲೆಫ್ಟ್ – 41 ಸದಸ್ಯರು4) ಗ್ರೀನ್ಸ್/ಯೂರೋಪಿಯನ್ ಫ್ರೀ ಅಲಾಯನ್ಸ್ – 75 ಸದಸ್ಯರು
5) ಕನ್ಸರ್ವೇಟಿವಸ್ಸ್ ಆ್ಯಂಡ್ ರಿಫಾರ್ಮಿಸ್ಟ್ಸ್ – 66 ಸದಸ್ಯರು
6) ರಿನಿವ್ ಯೂರೋಪ್ ಗ್ರೂಪ್ – 108 ಸದಸ್ಯರು
ಐರೋಪ್ಯ ಒಕ್ಕೂಟದ ಸಂಸದರ ಈ ನಿರ್ಣಯಗಳ ಬಗ್ಗೆ ಭಾರತ ಅಸಮಾಧಾನ ವ್ಯಕ್ತಪಡಿಸಿದೆ. ಸಿಎಎ ಕಾಯ್ದೆ ಸಂಪೂರ್ಣವಾಗಿ ಭಾರತದ ಆಂತರಿಕ ವಿಚಾರವಾಗಿದೆ. ಉಭಯ ಸದನಗಳಲ್ಲಿ ಸಾರ್ವಜನಿಕ ಚರ್ಚೆ ನಡೆಸಿ ಪ್ರಜಾತಂತ್ರೀಯ ವಿಧಾನದಲ್ಲಿ ಮತ್ತು ಸರಿಯಾದ ಕ್ರಮದಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
“ಪ್ರತಿಯೊಂದು ಸಮಾಜ ಕೂಡ ವಿದೇಶೀಯರಿಗೆ ಪೌರತ್ವ ನೀಡುವಾಗ ಸಾಂದರ್ಭಿಕಕತೆ ಮತ್ತು ಷರತ್ತು ಎರಡನ್ನೂ ಪರಿಗಣಿಸುತ್ತದೆ. ಇದು ತಾರತಮ್ಯವಲ್ಲ. ವಾಸ್ತವವಾಗಿ, ಐರೋಪ್ಯ ಸಮಾಜಗಳು ಕೂಡ ಇದೇ ವಿಧಾನವನ್ನು ಅನುಸರಿಸಿರುವುದುಂಟು. ನಿರ್ಣಯದ ಕರಡು ರೂಪಿಸಿದವರು ಸರ್ಕಾರದಿಂದ ಸರಿಯಾದ ಮಾಹಿತಿ ಪಡೆದು ಮುಂದುವರಿಯುವುದು ಒಳಿತು” ಎಂದು ಕೇಂದ್ರದ ಮೂಲಗಳು ಹೇಳುತ್ತಿವೆ.