ಮಂಗಳೂರು: ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಮಂಗಳೂರು ಬಾಂಬ್ ಸ್ಪೋಟದ ಆರೋಪಿ ಆದಿತ್ಯ ರಾವ್ ಮಾನಸಿಕವಾಗಿ ಸಾಕಷ್ಟು ವಿಚಲಿತನಾಗಿದ್ದ. ಸಮಾಜದಲ್ಲಿ ತನ್ನ ಪ್ರತಿಭೆಗೆ ತಕ್ಕ ಬೆಲೆ ಮತ್ತು ಅವಕಾಶಗಳು ಸಿಗಲಿಲ್ಲ ಎಂಬ ಕಾರಣದಿಂದ ಈ ಕೃತ್ಯ ನಡೆಸಿದ್ದಾನೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಡಾ. ಪಿಎಸ್ ಹರ್ಷ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಪ್ರಕರಣದ ಆರೋಪಿ ಆದಿತ್ಯ ರಾವ್ನನ್ನು ಬಂಧಿಸಿದ್ದೇವೆ. ನಿನ್ನೆ ಬೆಂಗಳೂರಿನ ಕೋರ್ಟ್ಗೆ ಈತನನ್ನು ಹಾಜರು ಪಡಿಸಲಾಗಿತ್ತು. ಈಗ ಕೋರ್ಟ್ನಿಂದ ನಮ್ಮ ಕಸ್ಟಡಿಗೆ ಪಡೆದಿದ್ದೇವೆ. ಟ್ರಾನ್ಸಿಟ್ ವಾರಂಟ್ ಮೂಲಕ ವಶಕ್ಕೆ ಪಡೆದು ರಾತ್ರಿ 9ಕ್ಕೆ ಮಂಗಳೂರಿಗೆ ಕರೆತಂದಿದ್ದೇವೆ. ಬಳಿಕ ಆದಿತ್ಯನನ್ನು ವಿಚಾರಣೆ ಮಾಡಿದ್ದೇವೆ ಎಂದು ಆತನ ಕುರಿತು ಹಿನ್ನೆಲೆ ವಿವರಿಸಿದರು.
“ಮೂಲತಃ ಮಣಿಪಾಲ ನಿವಾಸಿಯಾದ 37 ವರ್ಷದ ಆದಿತ್ಯ, ಉನ್ನತ ಶಿಕ್ಷಣ ಪಡೆದಿದ್ದಾನೆ. ಮೈಸೂರಿನಲ್ಲಿ ಬಿಇ ಮೆಕ್ಯಾನಿಕಲ್ ಪದವಿ ಹಾಗೂ ಎಂಬಿಎ ಮಾರ್ಕೆಟಿಂಗ್ ಆಪರೇಷನ್ ಪದವಿ ಮಾಡಿದ್ದಾನೆ. ಇದಾದ ಬಳಿಕ ಬ್ಯಾಕಿಂಗ್ ಹಾಗೂ, ಇನ್ಶೂರೆನ್ಸ್ನ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡಿದ್ದಾನೆ. ಈತ ಎಲ್ಲೂ ಕೂಡ ದೀರ್ಘ ಕೆಲಸ ಮಾಡಿಲ್ಲ. ಪದೇಪದೇ ಕೆಲಸ ಬದಲಾಯಿಸುತ್ತಿದ್ದ,” ಎಂದು ಹರ್ಷ ಮಾಹಿತಿ ನೀಡಿದರು.
ಮುಂದುವರೆದ ಅವರು “ಇದಾದ ಬಳಿಕ ತಾನು ಓದಿದ ಮೆಕಾನಿಕಲ್ ಕ್ಷೇತ್ರದಲ್ಲಿ ಕೆಲಸ ಅರಸಿ ಪೀಣ್ಯದಲ್ಲಿ ಆಟೋಮೊಬೈಲ್ ಕಂಪನಿಯೊಂದರಲ್ಲಿ ಕೆಲಕಾಲ ಕೆಲಸ ಮಾಡಿದ. ಇದಾದ ಬಳಿಕ ಸುಳ್ಳು ದಾಖಲೆ ಸಲ್ಲಿಸಿ ಬಿಡದಿ ಟೊಯೊಟಾ ಕಂಪನಿಯಲ್ಲಿದ್ದ, ಎರಡೇ ತಿಂಗಳಲ್ಲಿ ಅಲ್ಲಿಂದಲೂ ಹೊರಬಂದು ಮಾನಸಿಕ ಖಿನ್ನತೆಗೆ ಒಳಗಾದ,” ಎಂದರು.
“ತನ್ನ ಅರ್ಹತೆಗೆ ತಕ್ಕ ಕೆಲಸ ಇಲ್ಲವೆಂದು ಖಿನ್ನತೆಗೆ ಜಾರಿದ ಈತ ಬಳಿಕ ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸಿದ. ನಂತರ ಧರ್ಮಸ್ಥಳ, ಉಡುಪಿ ಸುತ್ತಮುತ್ತ ಹಲವು ಕಾಲೇಜುಗಳಲ್ಲಿ ಸೆಕ್ಯುರಿಟಿಯಾಗಿ ಕೆಲಸ ಮಾಡಿದ ಇದರೊಟ್ಟಿಗೆ ಮಣಿಪಾಲದ ಆಶ್ಲೇಷಾ ಬಾರ್ನಲ್ಲಿ ಕೆಲಸಕ್ಕೆ ಸೇರಿ ಅಲ್ಲಿಯೇ ಆಶ್ರಯ ಪಡೆದ,” ಎಂದು ಆದಿತ್ಯನ ಹಿನ್ನೆಲೆಯನ್ನು ಹರ್ಷ ಬಿಚ್ಚಿಟ್ಟರು.
“ನಂತರ ಮತ್ತೆ ಬೆಂಗಳೂರಿಗೆ ಬಂದ ಈತ ಇಲ್ಲೂ ಕೂಡ ಹಲವು ಹೊಟೇಲ್ಗಳಲ್ಲಿ ಕೆಲಸ ಮಾಡಿದ. ಎಂಟಿಆರ್, ಡೊಮಿನೊಸ್ಗಳಲ್ಲಿ ಕೆಲಸದಲ್ಲಿದ್ದ. ಇವೆಲ್ಲದರಿಂದ ಬೇಸತ್ತಾಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿಸೆಕ್ಯುರಿಟಿ ಕೆಲಸಕ್ಕೆ ಸೇರಲು ಮುಂದಾದ. ಆದರೆ, ಹೆಚ್ಚಿನ ವಿದ್ಯಾರ್ಹತೆ ಹಿನ್ನೆಲೆ ಕೆಲಸ ಸಿಗದಿದ್ದಾಗ ಇದೇ ಕಾರಣಕ್ಕೆ ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಮಾಡಿದ,” ಎಂದು ಹಳೆಯ ಘಟನೆಯನ್ನು ಹರ್ಷ ತಿಳಿಸಿದರು.
“ಬೆದರಿಕೆ ಕರೆ ಮಾಡಿದ ಪ್ರಕರಣದಲ್ಲಿ ಈತ ಚಿಕ್ಕಬಳ್ಳಾಪುರದಲ್ಲಿ 1 ವರ್ಷ ಜೈಲುಶಿಕ್ಷೆ ಅನುಭವಿಸಿದ. ಜೈಲಲ್ಲಿದ್ದಾಗಲೂ ಅಂತರ್ಮುಖಿಯಾಗಿದ್ದ ಈತ ಇನ್ನೂ ದೊಡ್ಡ ಪ್ಲಾನ್ಗೆ ಸ್ಕೆಚ್ ಹಾಕುತ್ತಿದ್ದ. ಹೊರಬಂದು ಅಲ್ಲಿಲ್ಲಿ ಓಡಾಡಿಕೊಂಡಿದ್ದ ಈತ ಸ್ಪೋಟ ಕಗಳ ಬಗ್ಗೆ ಅಧ್ಯಯನ ನಡೆಸಿದ. ಉತ್ತಮ ವಿದ್ಯಾಭ್ಯಾಸ ಹೊಂದಿದ ಹಿನ್ನೆಲೆ ಈ ಬಗ್ಗೆ ಆಳವಾದ ಜ್ಞಾನ ಪಡೆದು, ಕಚ್ಚಾ ವಸ್ತು ಸಂಗ್ರಹಿಸಿ ಬಾಂಬ್ ತಯಾರಿಸಿದ,” ಎಂದು ತನಿಖೆಯಲ್ಲಿ ತಿಳಿದ ಅಂಶವನ್ನು ಮಾಧ್ಯಮದ ಮುಂದಿಟ್ಟರು.”ಡಿಸೆಂಬರ್ನಲ್ಲಿ ಮಂಗಳೂರಿಗೆ ಬಂದು ಕುಡ್ಲ ಬಾರ್ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಈ ಸಂದರ್ಭದಲ್ಲಿ ರಜೆ ಸಮಯದಲ್ಲಿ ಬಾಂಬ್ ತಯಾರಿ ಮಾಡುತ್ತಿದ್ದ” ಎಂದು ಮಂಗಳೂರು ಪೊಲೀಸ್ ಆಯುಕ್ತರು ಈತನ ಮಾಹಿತಿ ಬಹಿರಂಗ ಪಡಿಸಿದರು.
ಆದಿತ್ಯನನ್ನು ಇಂದು ವಿಶೇಷ ಕೋರ್ಟ್ ಗೆ ಹಾಜರು ಮಾಡಲಾಗುವುದು. ಈ ವೇಳೆ ಪೊಲೀಸ್ ಕಸ್ಟಡಿಗೆ ಕೇಳುತ್ತೇವೆ. ಸ್ಫೋಟಕ ವಸ್ತುಗಳು ಲ್ಯಾಬ್ಗೆ ರವಾನೆ ಮಾಡಲಾಗಿದ್ದು, ಪ್ರಯೋಗಾಲಯ ವರದಿಗೆ ಕಾಯುತ್ತಿದ್ದೇವೆ. ದೇಶದ ಆಂತರಿಕ ಭದ್ರತೆಗೆ ಆದಿತ್ಯ ಅಪಾಯಕಾರಿ ಎಂದು ಹರ್ಷ ಅಭಿಪ್ರಾಯಪಟ್ಟರು.
“ಆದಿತ್ಯ ಹಲವು ರೀತಿಯ ಸ್ಫೋಟಕಗಳ ಬಗ್ಗೆ ತೀವ್ರ ಜ್ಞಾನ ಪಡೆದಿದ್ದಾನೆ. ಬಾಂಬ್ ಮಾಡುವುದು ಹೇಗೆ, ಯಾವ ಕೆಮಿಕಲ್, ಸ್ಫೋಟಕಗಳನ್ನು ಬಳಸಬೇಕು, ಹೇಗೆ ಅಸೆಂಬಲ್ ಮಾಡಬೇಕು ಎಂಬೆಲ್ಲದರ ಬಗ್ಗೆ ಆತ ವಿಚಾರಣೆ ವೇಳೆ ಮಾತನಾಡಿದ್ದಾನೆ. ಇದು ನಿಜಕ್ಕೂ ಕಳವಳಕಾರಿ ಸಂಗತಿ. ಆತ ಏನು ಹೇಳಿದ್ದಾನೆ ಎಂಬುದನ್ನು ಸಂಪೂರ್ಣವಾಗಿ ಸಾರ್ವಜನಿಕವಾಗಿ ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಅದು ಬಾಂಬ್ ಮೇಕಿಂಗ್ ಟ್ಯುಟೋರಿಯಲ್ ನಂತಿರುತ್ತದೆ” ಎಂದು ಹರ್ಷ ಹೇಳಿದರು.
ಇನ್ನು ಸ್ಪೋಟಕ ನಿಷ್ಕ್ರಿಯ ಅಣಕು ಪ್ರದರ್ಶನ ಎಂಬ ಎಚ್ಡಿ ಕುಮಾರಸ್ವಾಮಿ ಟೀಕೆಗೆ ಸ್ಪಷ್ಟನೆ ನೀಡಿದ ಅವರು, ಸ್ಫೋಟಕ ನಾಶ ಪ್ರಕ್ರಿಯೆ ಬಿಡಿಡಿಎಸ್ನದ್ದು. ಇದರಲ್ಲಿ ಸ್ಥಳೀಯ ಪೊಲೀಸರ ನಿರ್ಧಾರವಿಲ್ಲ. ಬಿಡಿಡಿಎಸ್ ತಂಡದ ನಿರ್ದೇಶದಂತೆ ನಾಶ ಮಾಡಿದ್ದು, ಪೊಲೀಸರು ಭದ್ರತೆ ಒದಗಿಸಿದ್ದೇವೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.