ಮೊಬೈಲ್‌ಗ‌ಳಲ್ಲಿ ಸಿಗಲಿದೆ ಇಸ್ರೋ ನಾವಿಕ್‌ ವ್ಯವಸ್ಥೆ

ಹೊಸದಿಲ್ಲಿ: ಅಮೆರಿಕದ ದೂರಸಂಪರ್ಕ ಕಂಪೆನಿ ಕ್ವಾಲ್ಕಾಂ ಮತ್ತು ಇಸ್ರೋ ನಡುವೆ ಸಹಭಾಗಿತ್ವ ಏರ್ಪಟ್ಟಿದೆ. ಈ ಒಪ್ಪಂದದ ಬಳಿಕ ಕ್ವಾಲ್ಕಾಂ ಕಂಪನಿ ಹೊರತರಲಿರುವ ಹೊಸ ಮೊಬೈಲ್‌ಗ‌ಳಲ್ಲಿ ಇಸ್ರೋ ಅಭಿವೃದ್ಧಿ ಪಡಿಸಿರುವ ನಾವಿಕ್‌ (NavIC) ಸಿಗಲಿದೆ. ಅದಕ್ಕಾಗಿ ಸ್ನ್ಯಾಪ್‌ಡ್ರಾಗನ್‌ 720ಜಿ, ಸ್ನ್ಯಾಪ್‌ಡ್ರಾಗನ್‌ 662 ಮತ್ತು ಸ್ನ್ಯಾಪ್‌ ಡ್ರಾಗನ್‌460 ಎಂಬ ಹೊಸ ರೀತಿಯ ಪ್ರೊಸೆಸರ್‌ಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿ ಸಲಾಗಿದೆ. ಇದೇ ಮೊದಲ ಬಾರಿಗೆ ಚಿಪ್‌ ತಯಾರಿಕಾ ಸಂಸ್ಥೆಯೊಂದು ಇಸ್ರೋ ಜತೆಗೆ ಕೈಜೋಡಿಸಿದೆ.

ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್‌, “ಸಂಸ್ಥೆ ಕ್ವಾಲ್ಕಾಂ ಹೊಂದಿರುವ ತಾಂತ್ರಿಕ ವ್ಯವಸ್ಥೆಯಲ್ಲಿ ಪರಿಶೀಲಿಸಿ ತೃಪ್ತಿ ಹೊಂದಿದ ನಂತರವೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಹೇಳಿದ್ದಾರೆ. ಅಮೆರಿಕದ ಜಿಪಿಎಸ್‌ ವ್ಯವಸ್ಥೆಗೆ ಸೆಡ್ಡು ಹೊಡೆವ ನಿಟ್ಟಿನಲ್ಲಿ ಇಸ್ರೋ ನಾವಿಕ್‌ ಎಂಬ ಹೊಸ ವ್ಯವಸ್ಥೆ ಅಭಿವೃದ್ಧಿಗೊಳಿಸಿದ್ದು, ಅದು ಹೆಚ್ಚಿನ ರೀತಿಯಲ್ಲಿ ಲಭ್ಯವಾಗಲು ಉಪಗ್ರಹಗಳನ್ನು ಉಡಾಯಿಸಿದೆ.

ಮೊಬೈಲ್‌ ಕಂಪನಿಗಳಾದ ಶಿಯೋಮಿ, ರಿಯಲ್‌ಮಿ ಈಗಾಗಲೇ ಕ್ವಾಲ್ಕಾಂ ಜತೆಗೆ ಕೈಜೋಡಿಸುವ ನಿರ್ಧಾರ ಪ್ರಕಟಿಸಿವೆ. ಮುಂದಿನ ದಿನಗಳಲ್ಲಿ ಈ ಎರಡೂ ಕಂಪನಿಗಳ ಫೋನ್‌ಗಳಲ್ಲಿ ಇಸ್ರೋದ ನಾವಿಕ್‌ ವ್ಯವಸ್ಥೆ ಒಳಗೊಳ್ಳಲಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ