ಬೆಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ಬೆಂಗಲೂರು ಸೇರಿದಂತೆ ರಾಜ್ಯದಾದ್ಯಂತ ಹೈಅಲರ್ಟ್ ಘೋಷಿಸಲಾಗಿದ್ದು, ಎಲ್ಲೆಡೆ ಖಾಕಿಪಡೆಗಳು ಕಚ್ಚೆಚ್ಚರ ವಹಿಸಿದೆ.
ಗಣರಾಜ್ಯೋತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೇ ಬಾಂಬ್ ಪತ್ತೆಯಾಗಿರುವುದು ಆತಂಕಕ್ಕೆ ಕಾರಣ ಆಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ರಾಜ್ಯದ ಎಲ್ಲಾ ವಿಮಾನ ನಿಲ್ದಾಣಗಳು, ಪ್ರಮುಖ ಅಣೆಕಟ್ಟು, ಪ್ರಸಿದ್ಧ ಪ್ರವಾಸಿ ತಾಣಗಳು ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಈ ಸಂಬಂಧ ತೀವ್ರ ನಿಗಾವಹಿಸುವಂತೆ ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಕಮಿಷನರೇಟ್’ಗಳಿಗೆ ಸೂಚನೆ ರವಾನಿಸಲಾಗಿದೆ.
ಇನ್ನು ಘಟನೆ ಸಂಬಂಧ ಕೇಂದ್ರ ಗೃಹ ಇಲಾಖೆ ಅಧಿಕಾರಿಗಳು ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದು, ಎಚ್ಚರಿಂದ ಇರುವಂತೆ ಸೂಚಿಸಿದ್ದಾರೆಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಇನ್ನು ಮಂಗಳೂರಿನಲ್ಲಿ ಬಾಂಬ್ ಪತ್ತೆಯಾಗುತ್ತಿದ್ದಂತೆಯೇ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳದಲ್ಲಿ ಶ್ವಾನದಳದ ಮೂಲಕ ತಪಾಸಣೆ ನಡೆಸಲಾಗಿದೆ. ಜನನಿಬಿಡ ಇರುವ ಪ್ರವಾಸಿ ತಾಣ ಸೇರಿದಂತೆ ಇತರ ಪ್ರದೇಶಗಳಲ್ಲಿ ಹೆಚ್ಚು ಭದ್ರತೆ ಕಲ್ಪಿಸುವಂತೆ ಸೂಚಿಸಲಾಗಿದೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವೂ ಹೆಚ್ಚಿನ ಭದ್ರತಾ ವ್ಯಾಪ್ತಿಯಲ್ಲಿ ಬರುತ್ತದೆ. ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಿಂದ ಭದ್ರತೆ ಇರುತ್ತದೆ. ನಿಲ್ದಾಣದ ಪ್ರವೇಶ ಸ್ಥಳದಲ್ಲೇ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ.
ಟರ್ಮಿನಲ್’ಗೆ ಪ್ರವೇಶ ಸೇರಿದಂತೆ ಹೆಜ್ಜೆಹೆಜ್ಜೆಗೆ ಭದ್ರತೆ ಇದೆ. ಜೊತೆಗೆ ಆವರಣದಲ್ಲಿ ಸ್ಥಲೀಯ ಪೊಲೀಸರು ಕೂಡ ವಿಶೇಷ ನಿಗಾವಹಿಸುತ್ತಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.