ಮಲೇಷಿಯಾ: ಕಾಶ್ಮೀರ ವಿಷಯ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಟೀಕಿಸಿದ್ದ ಮಲೇಷಿಯಾಗೆ ಭಾರತ ವ್ಯಾಪಾರ ಶಾಕ್ ನೀಡಿದೆ. ಮಲೇಷಿಯಾದಿಂದ ಆಮದಾಗುತ್ತಿದ್ದ ತಾಳೆ ಎಣ್ಣೆಯನ್ನು ಭಾರತ ಬಹಿಷ್ಕರಿಸಿದೆ. ಮೇಲ್ನೋಟಕ್ಕೆ ಇದು ಪ್ರತೀಕಾರದಂತಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಲ್ಲಿನ ಪ್ರಧಾನ ಮಂತ್ರಿ ಮಹಾತಿರ್ ಮೊಹಮ್ಮದ್, ಭಾರತ ತಾಳೆ ಎಣ್ಣೆ ಆಮದು ಬಹಿಷ್ಕರಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಲು ಮಲೇಷಿಯಾ ತುಂಬಾ ಚಿಕ್ಕ ರಾಷ್ಟ್ರ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಲೇಷಿಯಾದ ಲಂಗ್ಕಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಭಾರತದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ನಾವು ತುಂಬಾ ಚಿಕ್ಕವರು. ಈ ಸಮಸ್ಯೆಯನ್ನು ಬಗೆಹರಿಸಲು ನಾವು ಬೇರೆ ಮಾರ್ಗಗಳನ್ನು ಹುಡುಕಬೇಕಿದೆ,” ಎಂದು ತಿಳಿಸಿದ್ದಾರೆ.
ಮಲೇಷಿಯಾದಿಂದ ತಾಳೆ ಎಣ್ಣೆ ಆಮದು ಮಾಡಿಕೊಳ್ಳುವ ವಿಶ್ವದ ಅತೀ ದೊಡ್ಡ ರಾಷ್ಟ್ರ ಭಾರತವಾಗಿದೆ. 2018ರಲ್ಲಿ ಮಲೇಶಿಯಾದಿಂದ 1.3 ಬಿಲಿಯನ್ ಡಾಲರ್ನಷ್ಟು ತಾಳೆ ಎಣ್ಣೆಯನ್ನು ಭಾರತ ಆಮದು ಮಾಡಿಕೊಂಡಿತ್ತು. ವಾರ್ಷಿಕವಾಗಿ 90 ಮಿಲಿಯನ್ ಟನ್ಗಿಂತಲೂ ಹೆಚ್ಚು ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತಿದೆ. ತಾಳೆ ಎಣ್ಣೆ ರಫ್ತು ಮಾಡುವಲ್ಲಿ ಇಡೀ ವಿಶ್ವದಲ್ಲೇ ಮಲೇಷಿಯಾ ಎರಡನೇ ಸ್ಥಾನ ಪಡೆದಿದೆ.
ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಹಾಗೂ ಪೌರತ್ವ ಕಾಯ್ದೆ ಬಗ್ಗೆ ಮಲೇಷಿಯಾ ಪ್ರಧಾನಿ ಅಸಮಾಧಾನ ವ್ಯಕ್ತಪಡಿಸಿದ್ದರು. ಸಿಎಎ ಜಾರಿಯಿಂದಾಗಿ ಸಾಮಾಜಿಕ ಸಾಮರಸ್ಯ ಕದಡಲಿದೆ. ಇದು ಭಾರತ ಮಾತ್ರವಲ್ಲ, ಹೊರದೇಶಗಳಲ್ಲೂ ಪ್ರಭಾವ ಬೀರಲಿದೆ ಎಂದು ಅಭಿಪ್ರಾಯಪಟ್ಟಿದ್ದರು.
ಮಲೇಷಿಯಾ ಪ್ರಧಾನಿ ಹೇಳಿಕೆಯನ್ನು ಭಾರತ ತೀವ್ರವಾಗಿ ವಿರೋಧಿಸಿತ್ತು. ದೇಶದ ಆಂತರಿಕ ವಿಷಯಗಳಲ್ಲಿ ಮಹಾತಿರ್ ಮೂಗು ತೂರಿಸುವ ಅಗತ್ಯತೆ ಇಲ್ಲ ಎಂದು ಭಾರತ ತಿರುಗೇಟು ನೀಡಿತ್ತು.