ಒಂದೇ ಪಂದ್ಯದಲ್ಲಿ ಧೋನಿಯ ಎರಡೆರಡು  ದಾಖಲೆ ಮುರಿದ ವಿರಾಟ್ ಕೊಹ್ಲಿ

ಬೆಂಗಳೂರು: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಭಾರತ ಗೆದ್ದು ಬೀಗಿದೆ. ಈ ವರ್ಷದ ತವರಿನ ಅತ್ಯಂತ ಕಠಿಣ ಸರಣಿ ಎಂದೇ ಬಿಂಬಿತವಾಗಿದ್ದ ಆಸೀಸ್ ವಿರುದ್ಧದ ಸರಣಿಯನ್ನು ವಿರಾಟ್ ಪಡೆ 2-1 ಅಂತರದಿಂದ ಜಯಿಸಿದೆ. ಈ ಮೂಲಕ ಟೀಂ ಇಂಡಿಯಾ ಯಾಕೆ ವಿಶ್ವದ ಬಲಿಷ್ಠ ತಂಡ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ.

ಬೆಂಗಳೂರಿನ ಪಂದ್ಯದಲ್ಲಿ ನಾಯಕನ ಆಟವಾಡಿದ ವಿರಾಟ್ ಕೊಹ್ಲಿ 89 ರನ್ ಗಳಿಸಿದರು. ಭಾರತ ಜಯಿಸಲು ಕೇವಲ 13 ರನ್ ಅಗತ್ಯವಿದ್ದಾಗ ಕೊಹ್ಲಿ ಔಟಾದರು. ಅದರೂ ಕೊಹ್ಲಿ ಈ ಪಂದ್ಯದಲ್ಲಿ ಹೊಸ ದಾಖಲೆಯೊಂದನ್ನು ಬರೆದರು.

ವಿರಾಟ್ ಕೊಹ್ಲಿ ನಾಯಕನಾಗಿ ಅತೀ ಹೆಚ್ಚು ರನ್ ಗಳಿಸಿದ ಭಾರತೀಯ ಎಂಬ ದಾಖಲೆ ಬರೆದರು. ಈ ಮೊದಲು ಈ ದಾಖಲೆ ಮಹೇಂದ್ರ ಸಿಂಗ್ ಧೋನಿ ಹೆಸರಲ್ಲಿತ್ತು. ಮೂರು ಮಾದರಿಯಲ್ಲಿ ಸೇರಿ ಕೊಹ್ಲಿ ನಾಯಕನಾಗಿ 11208 ರನ್ ಗಳಿಸಿದರು. ಇದಕ್ಕಾಗಿ ಕೊಹ್ಲಿ ತೆಗೆದುಕೊಂಡಿದ್ದು ಬರೀ 199 ಇನ್ನಿಂಗ್ಸ್ ಮಾತ್ರ.

ಮಹೇಂದ್ರ ಸಿಂಗ್ ಧೋನಿ 330 ಇನ್ನಿಂಗ್ಸ್ ಗಳನ್ನು ಆಡಿ 11207 ರನ್ ಗಳಿಸಿದ್ದಾರೆ. ಅವರ ನಂತರದ ಸ್ಥಾನದಲ್ಲಿರುವ ಮೊಹಮ್ಮದ್ ಅಜರುದ್ದೀನ್ 230 ಇನ್ನಿಂಗ್ಸ್ ಗಳಲ್ಲಿ 8095 ರನ್ ಗಳಿಸಿದ್ದರು.

ಇದೇ ಸಮಯದಲ್ಲಿ ಧೋನಿಯ ಮತ್ತೊಮದು ದಾಖಲೆಯನ್ನು ಕೊಹ್ಲಿ ಅಳಿಸಿ ಹಾಕಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ ನಾಯಕನಾಗಿ ಅತೀ ವೇಗವಾಗಿ ಐದು ಸಾವಿರ ರನ್ ಗಳಿಸಿದ ಕೀರ್ತಿಗೆ ಕೊಹ್ಲಿ ಪಾತ್ರರಾದರು. ಇದು ವಿಶ್ವದಾಖಲೆಯೂ ಹೌದು.  ಈ ಹಿಂದೆ ಕೇವಲ 127 ಇನ್ನಿಂಗ್ಸ್ ನಲ್ಲಿ ನಾಯಕನಾಗಿ ಧೋನಿ ಏಕದಿನ 5000 ರನ್ ಗಳಿಸಿದ್ದರು. ಈ ದಾಖಲೆಯನ್ನು ಕೊಹ್ಲಿ ನೆಚ್ಚಿನ ಬೆಂಗಳೂರು ಮೈದಾನದಲ್ಲಿ ಅಳಿಸಿಹಾಕಿದ್ದು, ಇದಕ್ಕೆ ಬಳಸಿದ್ದು ಕೇವಲ 82  ಇನ್ನಿಂಗ್ಸ್ ಅಷ್ಟೇ..

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ