ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ಮುಕೇಶ್ ಸಿಂಗ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶುಕ್ರವಾ ವಜಾಗೊಳಿಸಿದ್ದಾರೆ.
ದೋಷಿ ಮುಕೇಶ್ ಸಿಂಗ್ ನ ಕ್ಷಮಾದಾನ ಅರ್ಜಿಯನ್ನು ವಜಾಗೊಳಿಸುವಂತೆ ಶಿಫಾರಸು ಮಾಡಿ ಕೇಂದ್ರ ಗೃಹ ಸಚಿವಾಲಯ ರಾಷ್ಟ್ರಪತಿಗೆ ಗುರುವಾರ ಸಂಜೆ ಕಳುಹಿಸಿತ್ತು.
ಮರಣದಂಡನೆ ಶಿಕ್ಷೆಯಿಂದ ವಿನಾಯ್ತಿ ನೀಡುವಂತೆ ಕೋರಿ ಮುಕೇಶ್ ಸಿಂಗ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ದಿಲ್ಲಿ ಸರ್ಕಾರ ಜನವರಿ 16ರಂದು ಮಧ್ಯಾಹ್ನ ಗೃಹ ಸಚಿವಾಲಯಕ್ಕೆ ಕಳುಹಿಸಿದ್ದು, ನಿನ್ನೆ ಸಂಜೆಯೇ ರಾಷ್ಟ್ರಪತಿಯವರಿಗೆ ರವಾನಿಸಲಾಗಿತ್ತು ಎಂದು ವರದಿ ವಿವರಿಸಿದೆ.
ಮಕೇಶ್ ಸಿಂಗ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ವಜಾಗೊಳಿಸುವಂತೆ ದಿಲ್ಲಿ ಸರ್ಕಾರ ಜನವರಿ 15ರಂದು ಶಿಫಾರಸು ಮಾಡಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು.
ವರದಿಯ ಪ್ರಕಾರ, ಮುಕೇಶ್ ಕ್ಷಮಾದಾನ ಅರ್ಜಿಯನ್ನು ಮೊದಲು ದಿಲ್ಲಿ ಸರ್ಕಾರ ವಜಾಗೊಳಿಸಿ ನಂತರ ಲೆಫ್ಟಿನೆಂಟ್ ಗವರ್ನರ್ ಗೆ ಕಳುಹಿಸಿ ತಿರಸ್ಕರಿಸುವಂತೆ ಶಿಫಾರಸು ಮಾಡಿತ್ತು. ಲೆಫ್ಟಿನೆಂಟ್ ಗವರ್ನರ್ ಕ್ಷಮಾದಾನ ಅರ್ಜಿಯನ್ನು ವಜಾಗೊಳಿಸಿ ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿದ್ದು, ಅಲ್ಲಿಂದ ರಾಷ್ಟ್ರಪತಿಗೆ ರವಾನಿಸಿತ್ತು.