ವಿಜಯವಾಡ: ಆಂಧ್ರದಲ್ಲಿ ಮತ್ತೊಮ್ಮೆ ರಾಜಕೀಯ ಧ್ರುವೀಕರಣ ಆಗಿದೆ. ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ ಮೂರು ವರ್ಷಗಳ ನಂತರ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ನಿನ್ನೆಯೇ ಈ ಮೈತ್ರಿಯ ಸುದ್ದಿ ಇತ್ತಾದರೂ ಇವತ್ತು ಅಧಿಕೃತವಾಗಿ ಘೋಷಿಸಲಾಗಿದೆ. ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಮತ್ತು ಆಂಧ್ರ ಬಿಜೆಪಿ ಅಧ್ಯಕ್ಷ ಕಣ್ಣ ಲಕ್ಷ್ಮೀ ನಾರಾಯಣ ಅವರು ಎರಡೂ ಪಕ್ಷಗಳ ಮೈತ್ರಿಯನ್ನು ಪ್ರಕಟಿಸಿದ್ದಾರೆ. ಆಂಧ್ರದಲ್ಲಿ ಆಡಳಿತಾರೂಢ ವೈಎಸ್ಸಾರ್ ಕಾಂಗ್ರೆಸ್ ಮತ್ತು ಟಿಡಿಪಿ ಪಕ್ಷಗಳಿಗೆ ಪರ್ಯಾಯವಾಗಿ ತೃತೀಯ ರಾಜಕೀಯ ಶಕ್ತಿ ಉದಯಕ್ಕೆ ಇದು ನಾಂದಿ ಹಾಡಿದಂತಾಗಿದೆ. 2024ರಲ್ಲಿ ಅಧಿಕಾರ ಹಿಡಿಯುವ ದೂರದೃಷ್ಟಿಯಿಂದ ಈಗಲೇ ಮೈತ್ರಿಯನ್ನು ಅಣಿಗೊಳಿಸಲಾಗಿದೆ.
ಆಂಧ್ರದಲ್ಲಿ ಜಾತೀಯ, ವಂಶಪಾರಂಪರ್ಯ ಮತ್ತು ಭ್ರಷ್ಟ ಶಕ್ತಿಯನ್ನು ಅಂತ್ಯಗೊಳಿಸಲು ತಮ್ಮ ಮೈತ್ರಿಕೂಟ ಕಟಿಬದ್ಧವಾಗಿದೆ ಎಂದು ಬಿಜೆಪಿ ಮತ್ತು ಜನಸೇನಾ ಪಕ್ಷಗಳ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಗಿದೆ. ಇದೇ ವೇಳೆ, ಎರಡೂ ಪಕ್ಷಗಳ ಜಂಟಿಯಾಗಿ ರಾಜಕೀಯ ನಡೆಗಳನ್ನಿರಿಸುವ ಸಲುವಾಗಿ ಜಂಟಿ ಸಮನ್ವಯ ಸಮಿತಿಯನ್ನು ರಚಿಸಲು ನಿರ್ಧರಿಸಿವೆ.
“ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಿಂದ ಹಿಡಿದು 2024ರ ವಿಧಾನಸಭಾ ಚುನಾವಣೆಯವರೆಗೂ ನಮ್ಮ ಮೈತ್ರಿಕೂಟವು ಒಟ್ಟಿಗೆ ಹೋರಾಡಲಿದೆ. ರಾಜ್ಯವನ್ನು ರಕ್ಷಿಸುವ ಗುರಿ ಇರಿಸಿಕೊಳ್ಳಲಾಗಿದೆ” ಎಂದು ಪತ್ರಿಕಾಗೋಷ್ಠಿಯಲ್ಲಿ ಪವನ್ ಕಲ್ಯಾಣ್ ಮತ್ತು ಕಣ್ಣ ಲಕ್ಷ್ಮೀ ನಾರಾಯಣ ತಿಳಿಸಿದ್ದಾರೆ.
ಮೂರು ವರ್ಷಗಳ ನಂತರ ಈ ಎರಡೂ ಪಕ್ಷಗಳು ಒಂದು ಸೇರುತ್ತಿವೆ. ಕಳೆದ ಬಾರಿ ಮಾಡಿಕೊಳ್ಳಲಾಗಿದ್ದ ಮೈತ್ರಿಯು ಸಂವಹನದ ಕೊರತೆಯಿಂದ ಮುರಿದುಬಿದ್ದಿತ್ತು ಎಂದು ಈ ಎರಡೂ ಪಕ್ಷಗಳು ಒಪ್ಪಿಕೊಂಡಿವೆ. ಈ ಬಾರಿ ತಿಂಗಳುಗಟ್ಟಲೆ ಸುದೀರ್ಘ ಸಮಾಲೋಚನೆಗಳನ್ನು ನಡೆಸಿ ಎಲ್ಲಾ ಸಾಧ್ಯಾಸಾಧ್ಯತೆಗಳನ್ನು ಚರ್ಚಿಸಿ ಮತ್ತೊಮ್ಮೆ ಮೈತ್ರಿ ರಚನೆ ಮಾಡಲಾಗಿದೆ. ಭಿನ್ನಾಭಿಪ್ರಾಯ ಸೃಷ್ಟಿಯಾಗದಂತೆ ಪ್ರಬುದ್ಧತೆ ತೋರಲು ಎರಡೂ ಪಕ್ಷಗಳ ನಾಯಕರು ನಿರ್ಧರಿಸಿದ್ದಾರೆ. ಪವನ್ ಕಲ್ಯಾಣ್ ಅವರು ಕೆಲ ದಿನಗಳ ಹಿಂದಷ್ಟೇ ನವದೆಹಲಿಗೆ ಹೋಗಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಮಾತುಕತೆ ನಡೆಸಿದ್ದರು.
ಆಂಧ್ರ ಪ್ರದೇಶದ ಹಿತದೃಷ್ಟಿಯಿಂದ ಜನಸೇನಾ ಪಕ್ಷವು ಬಿಜೆಪಿ ಜೊತೆ ಬೇಷರತ್ ಆಗಿ ಕೈಜೋಡಿಸಿದೆ. ಬಿಜೆಪಿ ಕೂಡ ಟಿಡಿಪಿಯತ್ತ ಕಣ್ಣೆತ್ತಿ ನೋಡದಿರಲು ನಿರ್ಧರಿಸಿದೆ. ಟಿಡಿಪಿ ಜೊತೆ ಯಾವುದೇ ಕಾರಣಕ್ಕೂ ಮರುಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಿಜೆಪಿಯ ಆಂಧ್ರ ಘಟಕದ ಅಧ್ಯಕ್ಷ ಸುನೀಲ್ ದೇವಧರ್ ಸ್ಪಷ್ಟಪಡಿಸಿದ್ಧಾರೆ. ಮುಂಬರಲಿರುವ ಸ್ಥಳೀಯ ಸಂಸ್ಥೆ ಚುನಾವಣೆಗಳು ಬಿಜೆಪಿ-ಜನಸೇನಾ ಪಾಲಿಗೆ ಪ್ರಯೋಗ ಶಾಲೆಯಾಗಬಹುದು. ಈ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳು ಈ ಸ್ಥಳೀಯ ಯುದ್ಧಕ್ಕೆ ಈಗಿನಿಂದಲೇ ತಯಾರಿ ನಡೆಸಿವೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನಸೇನಾ ಪಕ್ಷ ಒಂದು ಸ್ಥಾನವನ್ನಷ್ಟೇ ಗೆಲ್ಲಲು ಶಕ್ಯವಾದರೂ ಹಲವು ಕ್ಷೇತ್ರಗಳಲ್ಲಿ ಪ್ರಬಲ ಪೈಪೋಟಿ ನೀಡುವಲ್ಲಿ ಸಫಲಗೊಂಡಿತ್ತು. ಈಗ ಬಿಜೆಪಿ ಜೊತೆಗಿನ ಅವರ ಮೈತ್ರಿಯು ಕುತೂಹಲ ಮೂಡಿಸಿರುವುದಂತೂ ಹೌದು.