ಜನವರಿ 31 ರಿಂದ 2 ದಿನಗಳ ಕಾಲ ಬ್ಯಾಂಕ್‌ ಮುಷ್ಕರ: ಪ್ರತಿಭಟನೆಗಳಿಂದ ಕಂಗೆಟ್ಟಿರುವ ಜನ ಸಾಮಾನ್ಯರಿಗೆ ಮತ್ತಷ್ಟು ತೊಂದರೆ?

ಕೋಲ್ಕತ್ತ: ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ ವಿರೋಧಿ ಪ್ರತಿಭಟನೆ, ಮುಷ್ಕರಗಳಿಂದ ತತ್ತರಿಸಿರುವ ಜನತೆಗೆ ಈಗ ಬ್ಯಾಂಕ್‌ ಮುಷ್ಕರಕ್ಕೆ ಮತ್ತಷ್ಟು ಬರೆ ಎಳೆಯಲಿದೆ. ಜನವರಿ 31 ಹಾಗೂ ಫೆಬ್ರವರಿ 1 ರಂದು ಎರಡು ದಿನಗಳ ಕಾಲ ರಾಷ್ಟ್ರವ್ಯಾಪಿ ಬ್ಯಾಂಕ್‌ ಮುಷ್ಕರಕ್ಕೆ ಬ್ಯಾಂಕ್ ಒಕ್ಕೂಟಗಳು ಕರೆ ನೀಡಿವೆ.

ವೇತನ ಪರಿಷ್ಕರಣೆ ಕುರಿತು ಭಾರತೀಯ ಬ್ಯಾಂಕುಗಳ ಸಂಘ (ಐಬಿಎ)ದೊಂದಿಗೆ ನಡೆದ ಮಾತುಕತೆ ವಿಫಲವಾದ ಹಿನ್ನೆಲೆ ಜನವರಿ 31 ಹಾಗೂ ಫೆಬ್ರವರಿ 1 ರಂದು ದೇಶಾದ್ಯಂತ ಬ್ಯಾಂಕ್‌ ಮುಷ್ಕರಕ್ಕೆ ಹಲವು ಬ್ಯಾಂಕ್‌ ಒಕ್ಕೂಟಗಳು ಕರೆ ನೀಡಿವೆ.

ಇದರ ಜತೆಗೆ, ಒಂಬತ್ತು ಕಾರ್ಮಿಕ ಸಂಘಟನೆಗಳನ್ನು ಪ್ರತಿನಿಧಿಸುವ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ಮಾರ್ಚ್ 11-13 ರಿಂದ ಮೂರು ದಿನಗಳ ಕಾಲ ಮುಷ್ಕರ ನಡೆಸೋದಾಗಿಯೂ ಹೇಳಿಕೊಂಡಿದೆ. ಈ ಎರಡೂ ಮುಷ್ಕರಗಳು ನಡೆದರೆ ಬ್ಯಾಂಕ್‌ ಗ್ರಾಹಕರಿಗೆ ತೊಂದರೆಯಾಗುವುದಂತೂ ಖಚಿತವಾಗಿದೆ.

ಇನ್ನು, ಏಪ್ರಿಲ್ 1 ರಿಂದ ನಾವು ಅನಿರ್ದಿಷ್ಟ ಮುಷ್ಕರ ನಡೆಸಲು ನಿರ್ಧರಿಸಿದ್ದೇವೆ ಎಂದು ಯುಎಫ್‌ಬಿಯು ರಾಜ್ಯ ಸಂಚಾಲಕ ಸಿದ್ದಾರ್ಥ ಖಾನ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಯುಎಫ್‌ಬಿಯು ಕನಿಷ್ಠ ಶೇ. 15 ರಷ್ಟು ವೇತನ ಹೆಚ್ಚಳ ಬಯಸಿದ್ದು, ಭಾರತೀಯ ಬ್ಯಾಂಕುಗಳ ಸಂಘ ಶೇಕಡಾ 12.25 ರಷ್ಟು ಹೆಚ್ಚಳದ ಮಿತಿ ವಿಧಿಸಿದೆ. ಇದು ಸ್ವೀಕಾರಾರ್ಹವಲ್ಲ ಎಂದು ಸಿದ್ಧಾರ್ಥ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನವರಿ 13 ರಂದು ಕೊನೆಯ ಬಾರಿಗೆ ವೇತನ ಪರಿಷ್ಕರಣೆಯ ಸಂಬಂಧ ಸಭೆ ನಡೆದಿತ್ತು. ಆದರೆ, ಈ ಸಭೆಯಲ್ಲಿ ವೇತನ ಪರಿಷ್ಕರಣೆ ಸಂಬಂಧ ಕೈಗೊಂಡ ತೀರ್ಮಾನ ಬ್ಯಾಂಕ್‌ ಒಕ್ಕೂಟಗಳಿಗೆ ಅಸಮಾಧಾನ ತಂದಿದೆ. ಈ ಹಿನ್ನೆಲೆ ಮತ್ತೆ ಮುಷ್ಕರ ನಡೆಸಲು ತೀರ್ಮಾನಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ