ಮೂವರು ಉಗ್ರರಿಗೆ ಮನೆಯಲ್ಲಿ ಆಶ್ರಯ: ಜಮ್ಮು-ಕಾಶ್ಮೀರದ ಡಿವೈಎಸ್​​​ಪಿ ದೇವೇಂದರ್​​ ಸಿಂಗ್ ಅಮಾನತು

ಶ್ರೀನಗರ: ಮೂವರು ಉಗ್ರರಿಗೆ ಮನೆಯಲ್ಲಿ ಆಶ್ರಯ ನೀಡಿದ್ದ ಜಮ್ಮುಕಾಶ್ಮೀರದ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ಪೊಲೀಸ್ದೇವಿಂದರ್ ಸಿಂಗ್​​ರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಇಲ್ಲಿನ ಬಾದಾಮಿ ಬಾಗ್ ಕಂಟೋನ್ಮೆಂಟ್ ಬಳಿಯ ಎಕ್ಸ್​​ ವಿ ಕಾರ್ಪ್ಸ್ ಸೇನೆಯ ಪ್ರಧಾನ ಕಚೇರಿಯ ಪಕ್ಕದ ತನ್ನ ಮನೆಯಲ್ಲಿ ಮೂವರು ಉಗ್ರರಿಗೆ ದೇವೇಂದರ್​​ ಸಿಂಗ್ ಆಶ್ರಯ ನೀಡಿದ್ದರು. ಹಾಗಾಗಿ ದೇವೇಂದ್ರ ಸಿಂಗ್​​ರನ್ನು ಅಮಾನತು ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ಜಮ್ಮು-ಕಾಶ್ಮೀರದ ಡಿವೈಎಸ್​ಪಿ ದೇವಿಂದರ್ ಸಿಂಗ್​​ ಸೇರಿದಂತೆ ಇಬ್ಬರು ಉಗ್ರರ ಬಂಧನವಾಗಿತ್ತು. ದಕ್ಷಿಣ ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಲಷ್ಕರ್‌– ಇ ತೊಯ್ಬಾ ಸಂಘಟನೆಗೆ ಸೇರಿದ ಇಬ್ಬರು ಉಗ್ರರ ಜತೆಗೆ ಹಿರಿಯ ಪೊಲೀಸ್​ ಅಧಿಕಾರಿ ದೇವಿಂದರ್ ಸಿಂಗ್ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆಯಡಿ ಮೂವರ ವಿರುದ್ಧ ಎಫ್​​ಐಆರ್​​ ದಾಖಲಿಸಿಕೊಂಡ ಜಮ್ಮು-ಕಾಶ್ಮೀರದ ಪೊಲೀಸರು ವಿಚಾರಣೆ ಮುಂದುವರೆಸಿದ್ದರು.

ದೇವಿಂದರ್​​ ಸಿಂಗ್​​​ ಟಾಪ್ ರ್‍ಯಾಂಕರ್. ಕಳೆದ ವರ್ಷ ಆಗಸ್ಟ್​ 15ರಂದು ದೇವಿಂದರ್ ಸಿಂಗ್​ಗೆ ಶೌರ್ಯ ಪ್ರಶಸ್ತಿಯನ್ನು ನೀಡಲಾಯ್ತು. ಶ್ರೀನಗರ ಇಂಟರ್​ನ್ಯಾಷನಲ್ ಏರ್​ಪೋರ್ಟ್​ನಲ್ಲಿ ಆಯಂಟಿ ಹೈಜಾಕಿಂಗ್ ಸ್ಕ್ವಾಡ್​ನಲ್ಲಿ ಡಿಎಸ್​​​ಪಿ ಕಾರ್ಯನಿರ್ವಹಿಸುತ್ತಿದ್ದರು. ಆದರೀಗ ಇಬ್ಬರು ಉಗ್ರೊಂದಿಗೆ ಸಿಕ್ಕಿಬಿದ್ದಿದ್ಧಾರೆ.

ದೇವೆಂದರ್ ಸಿಂಗ್ ಅವರ ಜೊತೆ ಕಾರಿನಲ್ಲಿ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಸಯದ್ ನಾವೀದ್ ಮುಷ್ತಾಕ್, ರಫಿ ರಾಥೆರ್ ಹಾಗೂ ವಕೀಲ ಇರ್ಫಾನ್ ಶಫಿ ಮೀರ್ ಅವರಿದ್ದರು. ಮುಷ್ತಾಕ್ ಮತ್ತು ರಫಿಯನ್ನು ಶರಣಾಗತಿಗೆಂದು ಪೊಲೀಸರಿಗೆ ಒಪ್ಪಿಸಲು ತಮ್ಮ ಕಾರಿನಲ್ಲಿ ಕರೆದೊಯ್ಯುತ್ತಿದ್ದೆ ಎಂದು ದೇವೆಂದರ್ ಸಿಂಗ್ ವಿಚಾರಣೆ ವೇಳೆ ತಿಳಿಸಿದ್ದಾರೆ.

ಆದರೆ, ಮುಷ್ತಾಕ್ ಮತ್ತು ರಫಿ ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆಗೊಳಪಡಿಸಿದಾಗ ಅವರು ಶರಣಾಗತಿಯ ಯಾವುದೇ ವಿಚಾರ ತಮಗೆ ಗೊತ್ತಿಲ್ಲ ಎಂದು ಹೇಳಿರುವುದು ಪೊಲೀಸರಲ್ಲಿ ಅನುಮಾನ ಹೆಚ್ಚಿಸಿದೆ. ಕುತೂಹಲದ ವಿಷಯವೆಂದರೆ, ಭಯೋತ್ಪಾದಕರನ್ನು ಶರಣಾಗತಿ ಮಾಡಿಸುವ ಅಧಿಕಾರ ದೇವೆಂದರ್ ಸಿಂಗ್ ಅವರಿಗೆ ಕೊಟ್ಟಿಲ್ಲ. ಅವರು ಯಾವುದೇ ಪೊಲೀಸ್ ಅಥವಾ ಭದ್ರತಾ ಸಂಸ್ಥೆಗಳಿಗೆ ಈ ಬಗ್ಗೆ ಯಾವುದೇ ಮಾಹಿತಿಯನ್ನೂ ನೀಡಿರಲಿಲ್ಲ ಎನ್ನಲಾಗಿದೆ.

ಪ್ರಾಥಮಿಕ ತನಿಖೆಯಿಂದ ಪೊಲೀಸರಿಗೆ ತಿಳಿದುಬಂದ ಮಾಹಿತಿ ಎಂದರೆ, ಉಗ್ರಗಾಮಿಗಳನ್ನು ಸಾಗಿಸಲು ದವಿಂದರ್ 12 ಲಕ್ಷಕ್ಕೆ ಡೀಲ್ ಕುದುರಿಸಿದ್ದರು. ಹಿರಿಯ ಪೊಲೀಸ್ ಅಧಿಕಾರಿಯ ಕಾರನ್ನು ಯಾರೂ ತಡೆದು ತಪಾಸನೆ ನಡೆಸುವುದಿಲ್ಲವಾದ್ದರಿಂದ ಅವರು ತಮ್ಮ ಕಾರಿನಲ್ಲೇ ಅವರನ್ನು ಸಾಗಿಸುತ್ತಿದ್ದರು. ಹಿಜ್ಬುಲ್ ಕಮಾಂಡರ್ ಆಗಿರುವ ನಾವೀದ್ ಮುಷ್ತಾಕ್ ಅವರು ಹಿಂದೆ ಪೊಲೀಸ್ ಇಲಾಖೆಯಲ್ಲೇ ಇದ್ದವರು. ಈಗ ಉಗ್ರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. 370ನೇ ವಿಧಿ ರದ್ದಾದ ಬಳಿಕ ಸೇಬು ಸಾಗಿಸುವ ಟ್ರಕ್ ಡ್ರೈವರ್​​ಗಳ ಹತ್ಯೆಯಲ್ಲಿ ಇವರ ಕೈವಾಡ ಇರುವ ಶಂಕೆ ಇದೆ.

ಕಣಿವೆ ರಾಜ್ಯದಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಇರುವುದರಿಂದ ಡಿವೈಎಸ್​ಪಿಯ ನೆರವಿನಿಂದ ಅವರು ಜಮ್ಮುವಿನಲ್ಲಿನ ಅಡಗುದಾಣಕ್ಕೆ ಹೋಗಲು ಯತ್ನಿಸುತ್ತಿದ್ದುದು ತಿಳಿದುಬಂದಿದೆ. ಪೊಲೀಸರ ಪ್ರಕಾರ ದೇವೆಂದರ್​​ ಅವರು ಉಗ್ರರನ್ನು ಸಾಗಿಸಿದ್ದು ಇದೇ ಮೊದಲಲ್ಲ. ಹಿಂದೆ ಕನಿಷ್ಠ ಐದಾರು ಸಂದರ್ಭಗಳಲ್ಲಿ ಅವರು ಉಗ್ರರನ್ನು ಬನಿಹಾಲ್ ಹಾದಿಯಲ್ಲಿ ಜಮ್ಮುವಿಗೆ ಸಾಗಿಸಿದ್ದರು. ದೇವೆಂದರ್ ಸಿಂಗ್ ಅವರು ಈ ಉಗ್ರರನ್ನು ತಮ್ಮ ನಿವಾಸಕ್ಕೆ ಕರೆದೊಯ್ದು ಅಲ್ಲಿಂದ ತಮ್ಮ ಖಾಸಗಿ ವಾಹನದಲ್ಲಿ ಜಮ್ಮುವಿಗೆ ಕರೆದೊಯ್ಯುತ್ತಿದ್ದರೆನ್ನಲಾಗಿದೆ. ಇನ್ನು, ಮುಷ್ತಾಕ್ ಮತ್ತು ರಫಿ ಜೊತೆ ಇದ್ದ ಮೀರ್ ಎಂಬ ವಕೀಲರಿಗೆ ಪಾಕಿಸ್ತಾನದೊಂದಿಗೆ ನಂಟಿದೆ.

ಈತ ಐದು ಬಾರಿ ಪಾಕಿಸ್ತಾನಕ್ಕೆ ಹೋಗಿ ಬಂದಿದ್ದು, ಅಲ್ಲಿಯವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ.

ಭಯೋತ್ಪಾದಕರ ಬಗ್ಗೆ ಮಾಹಿತಿ ಸಂಗ್ರಹಿಸಲು ಪೊಲೀಸರು ರಹಸ್ಯವಾಗಿ ಉಗ್ರ ಸಂಘಟನೆಗಳ ಒಳ ಹೊಕ್ಕುವುದು ಸಾಮಾನ್ಯ. ಆದರೆ, ದವಿಂದರ್ ಸಿಂಗ್ ಅವರ ವಿಚಾರ ಬೇರೆಯೇ ಇದೆ. ಇವರು ಉಗ್ರರಿಗೆ ನೇರವಾಗಿ ನೆರವು ಒದಗಿಸುತ್ತಿದ್ದರು. ಕಾಶ್ಮೀರಕ್ಕೆ ಬರುವ ಟ್ರಕ್ ಡ್ರೈವರ್​ಗಳನ್ನು ಬೆದರಿಸಿ ಹಣ ವಸೂಲಿಯ ಕಾರ್ಯ ಮಾಡುತ್ತಿದ್ದರೆನ್ನಲಾಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಪೊಲೀಸರು ದವಿಂದರ್ ಸಿಂಗ್ ಅವರನ್ನು ಭಯೋತ್ಪಾದಕ ಎಂಬ ದೃಷ್ಟಿಯಿಂದಲೇ ವಿಚಾರಣೆ ನಡೆಸುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ