ನವದೆಹಲಿ: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶದ ವಿಚಾರವಾಗಿ ಸಲ್ಲಿಕೆಯಾಗಿರುವ ಮರುಪರಿಶೀಲನಾ ಅರ್ಜಿ ವಿಚಾರಣೆಯನ್ನು ಇಂದು ನಡೆಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಹೇಳಿದ್ದಾರೆ.
“ಅಯೋಧ್ಯೆ ಪ್ರಕರಣದ ಮಾದರಿಯಲ್ಲಿ ವಿಚಾರಣೆ ನಡೆಯಲಿ. ಏಳು ಅಂಶಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ವಾದ ಮಂಡಿಸಬೇಕು. ಯಾರು ಯಾವ ಅಂಶ ವಾದಿಸಬೇಕು ಎಂಬುದನ್ನು ನಿರ್ಧರಿಸಬೇಕಿದೆ. ಇಂದು ಪ್ರಕರಣವನ್ನು ವಿಚಾರಣೆ ಮಾಡಲು ಸಾಧ್ಯವಿಲ್ಲ,” ಎಂದು ಸಿಜೆಐ ಎಸ್.ಎ. ಬೋಬ್ಡೆ ಅಭಿಪ್ರಾಯ ಪಟ್ಟರು.
ಬೋಬ್ಡೆ ನೇತೃತ್ವದ 9 ಸದಸ್ಯರ ಪೀಠ 60 ಮರು ಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು ಮಾಡಬೇಕಿದೆ. ನ್ಯಾ. ಆರ್ ಭಾನುಮತಿ, ನ್ಯಾ. ಅಶೋಕ್ ಭೂಷಣ್, ನ್ಯಾ. ನಾಗೇಶ್ವರ್ ರಾವ್, ನ್ಯಾ. ಎಂ.ಎಂ. ಶಾಂತಗೌಡರ್, ನ್ಯಾ. ಎಸ್.ಎ ನಜೀರ್, ನ್ಯಾ. ಆರ್. ಸುಭಾಶ್ ರೆಡ್ಡಿ, ನ್ಯಾ. ಬಿ.ಆರ್. ಗವೈ ಮತ್ತು ನ್ಯಾ. ಸೂರ್ಯ ಕಾಂತ್ ಈ ಪೀಠದಲ್ಲಿದ್ದಾರೆ.
ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿ ಸಲ್ಲಿಕೆ ಆಗಿದ್ದ ಮೇಲ್ಮನವಿಯನ್ನು ಅಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಐದು ಸದಸ್ಯರ ಪೀಠ ವಿಚಾರಣೆ ನಡೆಸಿತ್ತು. ನವೆಂಬರ್ 14ರಂದು ತೀರ್ಪು ನೀಡಿದ್ದ ಪೀಠ, ಈ ಪ್ರಕರಣವನ್ನು 9 ಸದಸ್ಯರ ಪೀಠಕ್ಕೆ ವರ್ಗಾವಣೆ ಮಾಡಿತ್ತು.
“ಧರ್ಮದಲ್ಲಿ ಗಂಡು ಹೆಣ್ಣಿಗೆ ಸಮಾನ ಹಕ್ಕಿದೆ. ಗಂಡು-ಹೆಣ್ಣು ಇಬ್ಬರು ಸಮಾಜದಲ್ಲಿ ಸರಿಸಮಾನರು. ಧರ್ಮದ ವಿಮರ್ಶೆಗೆ ಅರ್ಜಿ ಹಾಕಲಾಗಿದೆ,” ಎಂದು ರಂಜನ್ ಗೋಗೋಯ್ ಅಭಿಪ್ರಾಯಪಟ್ಟಿದ್ದರು. ನಂತರ ಪ್ರಕರಣವನ್ನು 9 ನ್ಯಾಯಮೂರ್ತಿಗಳ ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಿದ್ದರು. ನ್ಯಾ. ಚಂದ್ರಚೂಡ್, ನ್ಯಾ. ನಾರಿಮನ್ಅವರು ಶಬರಿಮಲೆ ದೇಗುಲ ಮಹಿಳೆಯರ ಪ್ರವೇಶಕ್ಕೆ ನಿರಾಕರಣೆ ಮಾಡಿದ್ದರು. ಉಳಿದ ಮೂವರು ನ್ಯಾಯಮೂರ್ತಿಗಳು ಮಹಿಳೆಯರ ಪ್ರವೇಶವನ್ನು ಬೆಂಬಲಿಸಿದರು.