ವಾಷಿಂಗ್ಟನ್ : ಬುಧವಾರ ಅಪಘಾತಕ್ಕೀಡಾಗಿ 180 ಜನರ ಸಾವಿಗೆ ಕಾರಣವಾಗಿದ್ದ ಉಕ್ರೇನ್ ವಿಮಾನ ದುರಂತದ ಬಗ್ಗೆ ಅನೇಕ ನಾಯಕರು ಅನುಮಾನ ವ್ಯಕ್ತಪಡಿಸಿದ್ದರು. ಇದು ಸುಳ್ಳು ಎಂದು ಸ್ಪಷ್ಟನೆ ನೀಡಿರುವ ಇರಾನ್, ದುರಂತದ ಬಗ್ಗೆ ವರದಿ ನೀಡುವಂತೆ ಕೆನಡಾ ಬಳಿ ಕೇಳಿದೆ.
ಉಕ್ರೇನ್ ದೇಶದ ಅಂತಾರಾಷ್ಟ್ರೀಯ ಬೋಯಿಂಗ್ 737-800 ವಿಮಾನ ರಷ್ಯಾದ ಕೀವ್ ಎಂಬಲ್ಲಿಗೆ ಹೊರಟಿತ್ತು. ಇರಾನ್ ದೇಶದ ತೆಹ್ರಾನ್ನ ಇಮಾಮ್ ಖೊಮೇನಿ ವಿಮಾನ ನಿಲ್ದಾಣದಲ್ಲಿ ಇಳಿದು ಮತ್ತೆ ಹೊರಟ ಕೆಲವೇ ಕ್ಷಣಗಳಲ್ಲಿ ವಿಮಾನ ಅಪಘಾತಕ್ಕೀಡಾಗಿತ್ತು. ಈ ಅಪಘಾತದಲ್ಲಿ 180 ಜನ ಮೃತಪಟ್ಟಿದ್ದರು. ಈ ಬಗ್ಗೆ ಮಾತನಾಡಿದ್ದ ಡೊನಾಲ್ಡ್ ಟ್ರಂಪ್, “ಈ ವಿಮಾನ ನೆರೆಯ ರಾಷ್ಟ್ರದಲ್ಲಿ ಹಾರಾಟ ನಡೆಸುತ್ತಿತ್ತು. ಯಾರೋ ತಪ್ಪು ಮಾಡಿದ್ದಾರೆ ಎನ್ನುವ ಅನುಮಾನ ನನಗಿದೆ. ಕೆಲವರು ಈ ವಿಮಾನ ಅಪಘಾತಕ್ಕೆ ತಾಂತ್ರಿಕ ದೋಷ ಕಾರಣ ಎಂದು ಹೇಳಿದ್ದಾರೆ. ಆದರೆ, ನನಗೆ ಹಾಗೆ ಅನ್ನಿಸುವುದಿಲ್ಲ. ಭಯಾನಕ ಘಟನೆ ನಡೆದಿದೆ,” ಎಂದಿದ್ದರು.
ಇದಾದ ಬೆನ್ನಲ್ಲೇ ಇರಾನ್ ಪ್ರಕಟಣೆಯೊಂದನ್ನು ಹೊರಡಿಸಿದೆ. “ನಾವು ವಿಮಾನವನ್ನು ಹೊಡೆದುರುಳಿಸಿಲ್ಲ. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಕೆನಡಾ ಬಳಿ ಕೋರಿದ್ದೇವೆ. ಈ ತನಿಖೆಯಲ್ಲಿ ಅಮೆರಿಕ ಬೇಕಾದರೆ ಪಾಲ್ಗೊಳ್ಳಬಹುದು,” ಎಂದು ತಿಳಿಸಿದೆ.
ಇರಾನ್ ದೇಶದ ಸೇನಾ ಮುಖ್ಯಸ್ಥ ಖಾಸಿಂ ಸೊಲೈಮನಿ ಹತ್ಯೆಯಿಂದಾಗಿ ಕಳೆದ ಒಂದು ವಾರದಿಂದ ಅಮೆರಿಕ ಮತ್ತು ಇರಾನ್ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು. ಇದೇ ವೇಳೆಗೆ ಇರಾನ್ ನೆಲದಲ್ಲಿ ವಿಮಾನ ನೆಲಕ್ಕುರುಳಿದ್ದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿತ್ತು. “ಇರಾನ್ ಸೇನೆ ಅಚಾನಕ್ಕಾಗಿ ಉಕ್ರೇನ್ ವಿಮಾನವನ್ನು ಹೊಡೆದುರುಳಿಸಿದೆ,” ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿದ್ದವು.
ಆದರೆ, ತನಿಖೆ ನಡೆಸಿ ವರದಿ ನೀಡಿರುವ ಇರಾನ್ ನಾಗರೀಕ ವಾಯುಯಾನ ಸಂಸ್ಥೆ, “ವಿಮಾನ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲೇ ಬೆಂಕಿ ಕಾಣಿಸಿಕೊಂಡಿದೆ. ವಿಮಾನದ ಇಂಜಿನ್ನ ಒಂದು ಭಾಗ ಮಿತಿಮೀರಿ ಬಿಸಿಯಾಗಿದ್ದಕ್ಕೆ ಸಾಕ್ಷಿಗಳಿವೆ. ಅಲ್ಲದೆ, ವಿಮಾನ ನೆಲಕ್ಕೆ ಅಪ್ಪಳಿಸುವ ಮುನ್ನವೇ ಬೆಂಕಿಗೆ ಆಹುತಿಯಾಗಿತ್ತು” ಎಂದಿದೆ.