ಬೆಂಗಳೂರು: ಉಪಚುನಾವಣೆ ಫಲಿತಾಂಶ ಬಂದು ಒಂದು ತಿಂಗಳಾದರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಪುಟ ವಿಸ್ತರಣೆ ಗೋಜಿಗೆ ಹೋಗಿಲ್ಲ. ಸಂಕ್ರಾಂತಿ ವೇಳೆಗೆ ಸಂಪುಟ ವಿಸ್ತರಣೆ ಆಗಲಿದ್ದು, ಗೆದ್ದ 11 ಅನರ್ಹ ಶಾಸಕರ ಪೈಕಿ 9 ಶಾಸಕರಿಗೆ ಮಂತ್ರಿ ಸ್ಥಾನ ದೊರೆಯುವುದು ಪಕ್ಕಾ ಆಗಿದೆಯಂತೆ.
ಜನವರಿ 12 ಅಥವಾ 13ರಂದು ಬಿಎಸ್ವೈ ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳುವ ಸಾಧ್ಯತೆ ಇದೆ. ಈ ವೇಳೆ ತಮ್ಮ ಲೆಕ್ಕಾಚಾರವನ್ನು ಹೈಕಮಾಂಡ್ ಎದುರಿಟ್ಟು ಒಪ್ಪಿಗೆ ಪಡೆದುಬರುವ ಆಲೋಚನೆ ಅವರದ್ದು. ಉಪಚುನಾವಣೆಗೂ ಮೊದಲು ಗೆದ್ದ ಎಲ್ಲ ಅನರ್ಹರಿಗೂ ಸಚಿವ ಸ್ಥಾನ ನೀಡುವುದಾಗಿ ಸಿಎಂ ಭರವಸೆ ನೀಡಿದ್ದರು. ಆದರೆ ಈಗ ಅವರು ತಮ್ಮ ನಿರ್ಧಾರ ಬದಲಿಸಿದ್ದು, ಗೆದ್ದು ಅರ್ಹರಾದ 11 ಶಾಸಕರ ಪೈಕಿ 9 ಶಾಸಕರಿಗೆ ಮಾತ್ರ ಮಂತ್ರಿ ಪಟ್ಟ ನೀಡಲು ನಿರ್ಧರಿಸಿದ್ದಾರೆ.
ಉಪ ಚುನಾವಣೆಯಲ್ಲಿ ಸೋತ ಎಂಟಿಬಿ ನಾಗರಾಜ್, ಎಚ್ ವಿಶ್ವನಾಥ್ಗೆ ಸಚಿವ ಸ್ಥಾನ ಸಿಗುವುದು ಅನುಮಾನ ಎನ್ನುತ್ತಿವೆ ಮೂಲಗಳು. ಎಂಎಲ್ಸಿ ಆಗಿ ಸಚಿವರಾಗಬಹುದು ಎನ್ನುವ ಕನಸನ್ನು ಇವರು ಕಂಡಿದ್ದರು. ಆದರೆ, ಈ ಕನಸು ನನಸಾಗುವುದು ಅನುಮಾನ ಎನ್ನಲಾಗಿದೆ. ಇನ್ನು, ಆರ್.ಶಂಕರ್ ಅವರನ್ನು ಎಂಎಎಲ್ಸಿ ಮಾಡಿ ಮಂತ್ರಿ ಮಾಡುವ ಅನಿವಾರ್ಯತೆ ಬಿಎಸ್ವೈಗೆ ಇದೆ. ಅಲ್ಲದೆ, ಗೆದ್ದು ಅರ್ಹ ಎನಿಸಿಕೊಂಡಿರುವ ಆರ್.ಶಂಕರ್ಗೂ ಮಂತ್ರಿಭಾಗ್ಯ ಅನುಮಾನ. ಹೈಕಮಾಂಡ್ ಒಪ್ಪಿದರೆ ಜನವರಿ 18ರೊಳಗೆ ಸಂಪುಟ ವಿಸ್ತರಣೆ ಆಗಲಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬಿದ್ದು, ಬಿಜೆಪಿ ಸರ್ಕಾರ ರಚನೆ ಮಾಡುವಲ್ಲಿ ರಮೇಶ್ ಜಾರಕಿಹೊಳಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ರಮೇಶ್ಗೆ ಜಲಸಂಪನ್ಮೂಲ ಖಾತೆ ನೀಡುವುದು ನಿಶ್ಚಿತವಾಗಿದೆ. ಆದರೆ, ಉಳಿದ 8 ಜನರ ಖಾತೆ ಇನ್ನೂ ಫೈನಲ್ ಆಗಿಲ್ಲ. ಬೆಳಗಾವಿಯ ಇನ್ನಿಬ್ಬರು ಶಾಸಕರಾದ ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್ಗೆ ಸಚಿವ ಸ್ಥಾನ ನೀಡುವುದು ಅನುಮಾನ ಎನ್ನಲಾಗಿದೆ. ಹೀಗಾಗಿ, ಇಬ್ಬರಿಗೂ ಮನವೊಲಿಸಿ ಬೇರೆ ಸ್ಥಾನಮಾನ ನೀಡುವ ಸಾಧ್ಯತೆ ಇದೆ.