ಇರಾನ್ ಮಿಸೈಲ್ಸ್ ದಾಳಿಗೆ 80 ಅಮೆರಿಕನ್ ಸೈನಿಕರ ಸಾವು: ಇರಾನ್ ಮಾಧ್ಯಮ

ಟೆಹ್ರಾನ್: ಇರಾಕ್ ವಾಯುನೆಲೆಯಲ್ಲಿರುವ ಅಮೆರಿಕ ಪಡೆಗಳನ್ನು ಗುರಿಯಾಗಿರಿಸಿಕೊಂಡು ಇರಾನ್ ನಡೆಸಿದ 15 ಮಿಸೈಲ್ಸ್ ದಾಳಿಯಲ್ಲಿ 80 ಅಮೆರಿಕನ್ ಟೆರರಿಸ್ಟ್ (ಸೈನಿಕರು) ಸಾವನ್ನಪ್ಪಿರುವುದಾಗಿ ಇರಾನ್ ಸ್ಟೇಟ್ ಟೆಲಿವಿಷನ್ ವರದಿ ಮಾಡಿದೆ.

ನಮ್ಮ ಯಾವುದೇ ಮಿಸೈಲ್ಸ್ ಗಳಿಗೆ ತಡೆಯೊಡ್ಡಲು ಸಾಧ್ಯವಾಗಿಲ್ಲ ಎಂದು ಇರಾನ್ ಹೇಳಿದೆ. ರೆವಲ್ಯೂಷನರಿ ಗಾರ್ಡ್ಸ್ ಮೂಲಗಳ ಪ್ರಕಾರ, ಒಂದು ವೇಳೆ ಅಮೆರಿಕ ಪ್ರತ್ಯುತ್ತರ ನೀಡಲು ಮುಂದಾದರೆ ಇರಾನ್ ಕೂಡಾ ನೂರು ಇತರ ಪ್ರದೇಶಗಳ ಮೇಲೆ ದಾಳಿ ನಡೆಸಲು ಗುರಿ ಇರಿಸಿಕೊಂಡಿದೆ ಎಂದು ವರದಿ ತಿಳಿಸಿದೆ.

ಇರಾನ್ ಮಿಸೈಲ್ಸ್ ದಾಳಿಯಲ್ಲಿ ಅಮೆರಿಕದ ಹೆಲಿಕಾಪ್ಟರ್ ಗಳು ಮತ್ತು ಮಿಲಿಟರಿ ಯುದ್ಧೋಪಕರಣಗಳು ಹಾನಿಗೊಂಡಿರುವುದಾಗಿ ವರದಿ ತಿಳಿಸಿದೆ.

ಇರಾಕ್ ನಲ್ಲಿರುವ ಅಮೆರಿಕ ಮೈತ್ರಿಕೂಟದ ಪಡೆಗಳ ಮೇಲೆ ಬುಧವಾರ ನಸುಕಿನ ವೇಳೆ ಇರಾನ್ ಮಿಸೈಲ್ ದಾಳಿ ನಡೆಸಿದೆ. ಇತ್ತೀಚೆಗೆ ಅಮೆರಿಕದ ವೈಮಾನಿಕ ಪಡೆ ದಾಳಿ ನಡೆಸಿ ಇರಾನ್ ಮಿಲಿಟರಿ ಜನರಲ್ ಕಮಾಂಡರ್ ಖಾಸಿಂ ಸೊಲೆಮನಿಯನ್ನು ಹತ್ಯೆಗೈದಿತ್ತು. ಅಮೆರಿಕದ ವಿರುದ್ಧ ಪ್ರತೀಕಾರಕ್ಕಾಗಿ ಮಿಸೈಲ್ ದಾಳಿ ನಡೆಸಿರುವುದಾಗಿ ಇರಾನ್ ಹೇಳಿದೆ.

ಮಿಲಿಟರಿ ಜನರಲ್ ಖಾಸಿಂ ಸೊಲೆಮನಿ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳದೇ ಬಿಡುವುದಿಲ್ಲ. ಮಿಸೈಲ್ ದಾಳಿ ಅಮೆರಿಕಕ್ಕೆ ನೀಡಿದ ಎಚ್ಚರಿಕೆಯಾಗಿದೆ. ಒಂದು ವೇಳೆ ಅಮೆರಿಕ ಪ್ರತ್ಯುತ್ತರಕ್ಕೆ ಮುಂದಾದರೆ ನಾವು ಇನ್ನಷ್ಟು ಹಿಂಸಾತ್ಮಕ ದಾಳಿ ನಡೆಸಬೇಕಾಗುತ್ತದೆ ಎಂದು ಇರಾನ್ ಎಚ್ಚರಿಕೆ ನೀಡಿರುವುದಾಗಿ ವರದಿ ತಿಳಿಸಿದೆ.

ಮಧ್ಯ ಏಷ್ಯಾದಿಂದ ಅಮೆರಿಕ ತನ್ನ ಪಡೆಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳಬೇಕು ಎಂದು ಇರಾನ್ ಒತ್ತಾಯಿಸಿರುವುದಾಗಿ ಇರಾನ್ ಸ್ವಾಮಿತ್ವದ ಟಿವಿ ವರದಿ ಮಾಡಿದೆ.

ಇದೀಗ ಅಮೆರಿಕಕ್ಕೆ ನಮ್ಮ ಶಕ್ತಿ ಏನೆಂಬುದು ಅರ್ಥವಾಗಿದೆ. ಮಧ್ಯ ಏಷ್ಯಾದಿಂದ ಅಮೆರಿಕ ಪಡೆಗಳನ್ನು ವಾಪಸ್ ಕರೆಯಿಸಿಕೊಳ್ಳಲು ಇದೀಗ ಸಮಯ ಬಂದಿದೆ ಎಂದು ಇರಾನ್ ಸೇನಾಪಡೆಯ ಜನರಲ್ ಮೊಹಮ್ಮದ್ ಬಾಖೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ