ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ದಕ್ಷಿಣ ಕಾಶ್ಮೀರದ ಅವಂತಿಪೋರ ಪ್ರದೇಶದಲ್ಲಿ ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ 17 ವರ್ಷದ ಅಪ್ರಾಪ್ತ ಉಗ್ರನನ್ನು ಎನ್ಕೌಂಟರ್ ಮಾಡಲಾಗಿದೆ. ಭದ್ರತಾ ಪಡೆ ಮತ್ತು ಉಗ್ರರ ನಡುವಣ ಗುಂಡಿನ ಚಕಮಕಿಯಲ್ಲಿ 17 ವರ್ಷದ ಹುಡುಗನಿಗೆ ಶರಣಾಗಲು ಅವಕಾಶವನ್ನು ಕಲ್ಪಿಸಲಾಗಿತ್ತು. ಆದರೆ ಶರಣಾಗಲು ನಿರಾಕರಿಸಿ ದಾಳಿ ಮುಂದುವರಿಸಿದ್ದರಿಂದ ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ.
ಕಳೆದ 40 ದಿನಗಳಲ್ಲಿ ಕಾಶ್ಮೀರ ಭಾಗದಲ್ಲಿ ನಡೆದ ಮೊದಲ ಎನ್ಕೌಂಟರ್ ಇದಾಗಿದೆ. ಕಳೆದ ವರ್ಷ ನವೆಂಬರ್ 26ರಂದು ಪುಲ್ವಾಮ ಜಿಲ್ಲೆಯ ದ್ರಬ್ಗಮ್ ಪ್ರದೇಶದಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಕಾಳಗ ನಡೆದಿತ್ತು. ಈ ಸಂದರ್ಭ ಭದ್ರತಾ ಪಡೆ ನಡೆಸಿದ ಎನ್ಕೌಂಟರ್ಗೆ ಲಷ್ಕರೆ ತೈಬಾ ಸಂಘಟನೆಯ ಇಬ್ಬರು ಉಗ್ರರು ಸಾವನ್ನಪ್ಪಿದ್ದರು.
ಬಾಲಕನ ತಂದೆಯ ಆಕ್ರಂದನ
ಹತನಾದ ಉಗ್ರ ಬಾಲಕ ಅನಂತನಾಗ್ ಜಿಲ್ಲೆಯ ಬಿಜ್ಬೆಹರದ ಅರ್ವಾನಿ ಪ್ರದೇಶ ನಿವಾಸಿ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. ಕಳೆದ ವಾರ ನಾಪತ್ತೆಯಾಗಿದ್ದ ಬಾಲಕ ಉಗ್ರರ ತಂಡ ಸೇರಿಕೊಂಡಿದ್ದ. ನಾಪತ್ತೆಯಾಗುವ ಸಂದರ್ಭ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎನ್ಕೌಂಟರ್ ನಡೆದ ಸಂದರ್ಭ ಚಿತ್ರೀಕರಿಸಲಾದ ವಿಡಿಯೋ ಎಂತವರ ಮನವನ್ನು ಕಲಕುವಂತಿದೆ. 17 ವರ್ಷದ ಬಾಲಕನ ತಂದೆ ಮತ್ತು ಸಂಬಂಧಿಗಳು ಶರಣಾಗುವಂತೆ ಪರಿಪರಿಯಾಗಿ ಹೇಳುತ್ತಿರುವ ದೃಶ್ಯವಿದೆ. ”ನಿನ್ನ ತಾಯಿ ಸಾವನ್ನಪ್ಪುತ್ತಿದ್ದಾಳೆ. ನೀನು ಕೇಳಿದ್ದನ್ನೆಲ್ಲ ಕೊಡುತ್ತೇನೆ. ದಯವಿಟ್ಟು ಹೊರಗೆ ಬಾ” ಎಂದು ತಂದೆ ಅಳುತ್ತಿರುವ ದೃಶ್ಯವಿದೆ.