ನವದೆಹಲಿ,ಜ.6- ಕೇಂದ್ರ ಸರ್ಕಾರದ ಕಾರ್ಮಿಕ ಸುಧಾರಣೆ ವಿರೋಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಜ.8ರ ಬುಧವಾರ ಭಾರತ ಬಂದ್ಗೆ ಕರೆ ನೀಡಿವೆ. ಇದರಿಂದಾಗಿ ಅಂದು ದೇಶಾದ್ಯಂತ ಬ್ಯಾಂಕ್ ವಹಿವಾಟು ಸ್ಥಗಿತಗೊಳ್ಳಲಿದ್ದು,ಗ್ರಾಹಕರಿಗೆ ತೀವ್ರ ಅನಾನುಕೂಲವಾಗುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರಿ ನೌಕರರು, ಬ್ಯಾಂಕ್ ಉದ್ಯೋಗಿಗಳು, ಶಿಕ್ಷಕರು ಉಕ್ಕು ಮತ್ತು ರೈಲ್ವೆ ಸೇರಿದಂತೆ ವಿವಿಧ ವಲಯಗಳ ನೌಕರರು ಬಂದ್ ಬೆಂಬಲ ನೀಡಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗುವ ಸಾಧ್ಯತೆಗಳಿವೆ.
ಕಾರ್ಮಿಕರಿಗೆ ಸಂಬಂಸಿದ 44 ಕಾಯ್ದೆಗಳನ್ನು ವಿಲೀನಗೊಳಿಸಿ ವೇತನ, ಕೈಗಾರಿಕಾ ಸಂಬಂಧ, ಸಾಮಾಜಿಕ ಭದ್ರತೆ, ಸುರಕ್ಷತಾ ನಿರ್ವಹಣಾ ಷರತ್ತು ಎಂಬ ನಾಲ್ಕು ಸಂಹಿತೆಗಳನ್ನು ರೂಪಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. 2018ರ ನವೆಂಬರ್ ತಿಂಗಳಿನಲ್ಲಿ ಕೈಗಾರಿಕಾ ಸಂಬಂಧದಲ್ಲಿನ ಕಾರ್ಮಿಕ ಸಂಹಿತೆಗೆ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿದೆ ನೀಡಿದೆ.
ಅದರ ಪ್ರಕಾರ ಈಗಿನ ಕಾರ್ಮಿಕ ಸಂಘಟನೆಗಳ ಮಾನ್ಯತೆಯನ್ನು ರದ್ದುಗೊಳಿಸಲಾಗುತ್ತದೆ. ಶೇ.75 ಕಾರ್ಮಿಕರ ಬೆಂಬಲ ಹೊಂದಿರುವ ಕಾರ್ಮಿಕ ಸಂಘಟನೆಗಳಿಗೆ ಮಾತ್ರ ಮಾನ್ಯತೆ ನೀಡಲಾಗುತ್ತದೆ. ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕುವುದು ಉದ್ಯೋಗದಾತರಿಗೆ ಸುಲಭವಾಗಲಿದೆ.