ವಾಷಿಂಗ್ಟನ್, ಜ.6-ಇರಾಕ್ನಿಂದ ಅಮೆರಿಕ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್.
ಸೇನಾಪಡೆಯನ್ನು ಹೊರದಬ್ಬುವ ಪ್ರಯತ್ನ ನಡೆದಿದ್ದೇ ಆದರೇ ಬಾಗ್ದಾದ್ ಮೇಲೆ ಭಾರೀ ದಿಗ್ಬಂಧನ ಮತ್ತು ನಿರ್ಬಂಧ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ಅಮೆರಿಕನ್ನರ ಮೇಲೆ ಆಕ್ರಮಣ ಮಾಡಲು ಯತ್ನಿಸಿದರೆ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ ನಡೆಸುವುದಾಗಿ ಮತ್ತೊಮ್ಮೆ ಗುಡುಗಿದ್ದಾರೆ.
ಈ ಎರಡೂ ದೇಶಗಳ ವಿರುದ್ಧ ಟ್ರಂಪ್ ಕಿಡಿಕಾರಿರುವುದರಿಂದ ಮಧ್ಯ ಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡಗಳು ಮತ್ತಷ್ಟು ದಟ್ಟವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಇರಾನ್ ಅತ್ಯುನ್ನತ ಸೇನಾಧಿಕಾರಿ ಜನರಲ್ ಖಾಸಿಂ ಸುಲೈಮಾನಿ ಡ್ರೋಣ್ ದಾಳಿಯಲ್ಲಿ ಹತರಾದ ನಂತರ ಇರಾಕ್ನಲ್ಲಿರುವ ಅಮೆರಿಕ ಸೇನಾಪಡೆಯನ್ನು ದೇಶದಿಂದ ಹೊರದಬ್ಬಲು ಇರಾನ್ ಸಂಸತ್ತಿನಲ್ಲಿ ನಿರ್ಣಯ ಕೈಗೊಂಡ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಟ್ರಂಪ್, ಬಾಗ್ದಾದ್ನಲ್ಲಿ ಅತ್ಯಂತ ದುಬಾರಿ ವಾಯು ನೆಲೆಯನ್ನು ನಿರ್ಮಿಸಲು ಇರಾಕ್ ಅಮೆರಿಕಾಕ್ಕೆ ಹಣ ನೀಡಿದೆ ಹೊರತು ನಮ್ಮ ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಹಾಗೇನಾದರೂ ಅಮೆರಿಕ ಯೋಧರನ್ನು ಅಲ್ಲಿಂದ ಉಚ್ಛಾಟಿಸುವ ಯತ್ನ ನಡೆದರೆ ಇರಾಕ್ ಅದಕ್ಕೆ ಭಾರೀ ಬೆಲೆ ತೆರೆಬೇಕಾಗುತ್ತದೆ. ಆ ದೇಶದ ವಿರುದ್ಧ ನಾನು ಅತ್ಯಂತ ಕಠಿಣ ದಿಗ್ಬಂಧನ ಮತ್ತು ನಿರ್ಬಂಧ ವಿಧಿಸಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಕೆ ನೀಡಿದರು.
ಫ್ಲಾರಿಡಾದಲ್ಲಿ ಪ್ರವಾಸ ಪೂರ್ಣಗೊಳಿಸಿ ವಾಷಿಂಗ್ಟನ್ಗೆ ಹಿಂದಿರುಗುವಾಗ ಏರ್ಫೋರ್ಸ್ ಒನ್ನಲ್ಲಿ (ರಾಷ್ಟ್ರಾಧ್ಯಕ್ಷ ವಿಶೇಷ ವಿಮಾನ) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಟ್ರಂಪ್, ಇರಾಕ್ ಜೊತೆ ಇರಾನ್ಗೂ ಎಚ್ಚರಿಕೆ ನೀಡಿದರು.
ಅಣ್ವಸ್ತ್ರ ನಿಶ್ಯಸ್ತ್ರೀಕರಣ ಒಪ್ಪಂದದಿಂದ ಇರಾನ್ ದೂರ ಸರಿದಿರುವುದಕ್ಕೆ ಟ್ರಂಪ್ ಕೆಂಡಮಂಡಲವಾದರು. ಸುಲೈಮಾನಿ ಹತ್ಯೆ ನಂತರ ಅಮೆರಿಕ ಸೇನಾ ನೆಲೆಗಳು ಮತ್ತು ರಾಯಭಾರಿ ಕಚೇರಿಗಳ ಮೇಲೆ ದಾಳಿ ನಡೆಸಲು ಇರಾನ್ ಯತ್ನಿಸುತ್ತಿದೆ. ಹಾಗೇನಾದರೂ ಮುಂದುವರಿದಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿ ನಾವು ಇರಾನ್ನ ಪ್ರಮುಖ ಸ್ಥಳಗಳ ಮೇಲೆ ಅತ್ಯಂತ ಭೀಕರ ದಾಳಿ ನಡೆಸುವುದಾಗಿ ಪುನರುಚ್ಚರಿಸಿದರು.
ಇರಾನ್, ಇರಾಕ್ ಅಥವಾ ಇತರ ಯಾವುದೇ ಭಾಗದಲ್ಲಿರುವ ಅಮೆರಿಕ ಸಿಬ್ಬಂದಿ ಅಥವಾ ನೆಲೆಗಳ ಮೇಲೆ ಇರಾನ್ ದಾಳಿ ಮಾಡಿದರೆ ನಾವು ಅತ್ಯಂತ ಕ್ಷಿಪ್ರವಾಗಿ ಮತ್ತು ಪ್ರಬಲವಾಗಿ ಆಕ್ರಮಣ ಮಾಡುತ್ತೇವೆ. ಇರಾನ್ನ 52 ಸ್ಥಳಗಳನ್ನು ನುಚ್ಚುನೂರು ಮಾಡುತ್ತೇವೆ ಎಂದು ಟ್ರಂಪ್ ನಿನ್ನೆಯಷ್ಟೇ ಸ್ಪಷ್ಟ ಎಚ್ಚರಿಕೆ ನೀಡಿದ್ದರು.