ನವದೆಹಲಿ, ಜ.6-ರಾಜಧಾನಿ ದೆಹಲಿಯ ಪ್ರತಿಷ್ಠಿತ ಜವಹರ್ಲಾಲ್ ನೆಹರು ವಿಶ್ವವಿದ್ಯಾಲಯoದ ಸಬರಮತಿ ವಸತಿನಿಲಯದಲ್ಲಿ ನಿನ್ನೆ ರಾತ್ರಿ ಶಸ್ತ್ರಸಚ್ಚಿತ ಮುಸುಕುಧಾರಿ ದುಷ್ಕರ್ಮಿಗಳಿಂದ ವಿದ್ಯಾರ್ಥಿಗಳು ಮತ್ತು ಪ್ರೊಫೆಸರ್ಗಳ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಮತ್ತು ದಾಂಧಲೆ ಘಟನೆಗಳ ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೋಶ ಭುಗಿಲೆದ್ದಿದೆ.
ಈ ದಾಳಿಯಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಕೆಲವರ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಈ ಘಟನೆಯಿಂದ ಜೆಎನ್ಯುನಲ್ಲಿ ಭಯಭೀತಿಯ ವಾತಾವರಣ ನೆಲೆಸಿದ್ದು, ಭಾರೀ ಸಂಖ್ಯೆಯ ಪೋಲೀಸರನ್ನು ಬಂದೋಬಸ್ತ್ಗಾಗಿ ನಿಯೋಜಿಸಲಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಈ ಘಟನೆಯನ್ನು ತೀವ್ರವಾಗಿ ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ವಿಶ್ವವಿದ್ಯಾಲಯಗಳು ಮತ್ತು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾರೀ ಪ್ರತಿಭಟನೆ ನಡೆಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಜಂಟಿ ಪೋಲೀಸ್ ಆಯುಕ್ತರ ಮಟ್ಟದ ಉನ್ನತಾಧಿಕಾರಿಯೊಬ್ಬರಿಂದ ಈ ಘಟನೆ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದಾರೆ. ಕೇಂದ್ರ ಸರ್ಕಾರದ ಆದೇಶದಂತೆ ದೆಹಲಿ ಪೋಲೀಸ್ ಜಂಟಿ ಆಯುಕ್ತರಾದ (ಪಶ್ಚಿಮ ವಲಯ) ಶಾಲಿನಿ ಸಿಂಗ್ ಜೆಎನ್ಯು ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ದೆಹಲಿ ಪೋಲೀಸರು ಈ ಪ್ರಕರಣದಲ್ಲಿ ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಜೆಎನ್ಯುಗೆ ಪೋಲೀಸ್ ಸರ್ಪಗಾವಲು : ಮುಸುಕುದಾರಿ ಶಸ್ತ್ರಸಜ್ಜಿತ ದುಷ್ಕರ್ಮಿಗಳಿಂದ ಜೆಎನ್ಯು ವಿದ್ಯಾರ್ಥಿಗಳು ಮತ್ತು ಪ್ರೊಫೆಸರ್ಗಳ ಮೇಲೆ ಹಲ್ಲೆ ಮತ್ತು ಆವರಣದಲ್ಲಿ ನಡೆದ ದಾಂಧಲೆ ಹಿನ್ನೆಲೆಯಲ್ಲಿ ನಿನ್ನೆ ಮಧ್ಯರಾತ್ರಿಯಿಂದಲೇ ವಿಶ್ವವಿದ್ಯಾಲಯದಲ್ಲಿ ಹೆಚ್ಚುವರಿ ಪೋಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಗುರುತಿನ ಚೀಟಿ ಇರುವ ವಿದ್ಯಾರ್ಥಿಗಳನ್ನು ಮಾತ್ರ ವಿಶ್ವವಿದ್ಯಾಲಯದೊಳಗೆ ಪ್ರವೇಶಿಸಲು ಪೋಲೀಸರು ಅವಕಾಶ ನೀಡುತ್ತಿದ್ದಾರೆ. ಮಾಧ್ಯಮದವರೂ ಸೇರಿದಂತೆ ಹೊರಗಿನವರಿಗೆ ಕಾಲೇಜು ಕ್ಯಾಂಪಸ್ ಪ್ರವೇಶಿಸಲು ಅನುಮತಿ ನೀಡುತ್ತಿಲ್ಲ. ಜೆಎನ್ಯುನಲ್ಲಿ ಬೂದಿ ಮುಚ್ಚಿದ ಕೆಂಡದಂಥ ವಾತಾವರಣ ನೆಲೆಸಿದೆ.
ಗಾಯಾಳು ವಿದ್ಯಾರ್ಥಿಗಳು ಡಿಶ್ಚಾರ್ಜ್: ನಿನ್ನೆ ರಾತ್ರಿ 8.30ರಲ್ಲಿ ಜೆಎನ್ಯು ಆವರಣದ ಸಬರಮತಿ ಹಾಸ್ಟೆಲ್ಗೆ ದೊಣ್ಣೆಗಳು, ಕಬ್ಬಿಣದ ಸರಳುಗಳು ಮತ್ತು ರಾಸಾಯನಿಕ ಪುಡಿಗಳೊಂದಿಗೆ ನುಗ್ಗಿದ ಸುಮಾರು 20 ಮಂದಿ ಮುಸುಕುದಾರಿಗಳು, ವಿದ್ಯಾರ್ಥಿಗಳನ್ನು ನೀವು ಎಡಪಂಥಿಯರೇ ಎಂದು ಪ್ರಶ್ನಿಸುತ್ತಾ ಮರಣಾಂತಿಕ ಹಲ್ಲೆ ನಡೆಸಿದರು.
ದುಷ್ಕರ್ಮಿಗಳ ದಾಳಿಯಲ್ಲಿ ಜೆಎನ್ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಐಶೆ ಘೋಷ್ ಮತ್ತು ಮಹಾ ಪ್ರಧಾನಕಾರ್ಯದರ್ಶಿ ಸತೀಶ್ಚಂದ್ರ ಸೇರಿದಂತೆ ಸುಮಾರು 30 ವಿದ್ಯಾರ್ಥಿಗಳು ಗಾಯಗೊಂಡರು. ಇವರೆಲ್ಲರನ್ನು ನಿನ್ನೆ ರಾತ್ರಿಯೇ ದೆಹಲಿಯ ಏಮ್ಸ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಯಿತು. ಘೋಷ್, ಚಂದ್ರ ಸೇರಿದಂತೆ ಹಲವರು ವಿದ್ಯಾರ್ಥಿಗಳನ್ನು ಇಂದು ಬೆಳಗ್ಗೆ ಆಸ್ಪತ್ರೆಯಿಂದ ಡಿಶ್ಚಾರ್ಜ್ ಮಾಡಲಾಗಿದೆ. ತಲೆಗೆ ಗಾಯಗಳಾಗಿ ಹೊಲಿಗೆ ಹಾಕಿರುವ ಕೆಲವು ವಿದ್ಯಾರ್ಥಿಗಳಿಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಸಲಾಗಿದೆ.
ಲೆ.ಗೌ ಬೈಜಾಲ್ಗೆ ಶಾ ಸೂಚನೆ : ಈ ಮಧ್ಯೆ ಗೃಹ ಸಚಿವ ಅಮಿತ್ ಶಾ ದೆಹಲಿ ಲೆಫ್ಟಿನೆಂಟ್ ಗೌರ್ನರ್ ಅನಿಲ್ ಬೈಜಾಲ್ ಅವರಿಗೆ ಸೂಚನೆ ನೀಡಿ ಜೆಎನ್ಯು ಪ್ರತಿನಿಧಿಗಳೊಂದಿಗೆ ಪರಿಸ್ಥಿತಿ ತಿಳಿಗೊಳಿಸಲು ಚರ್ಚಿಸುವಂತೆ ಸೂಚಿಸಿದರು.
ಅದರಂತೆ ಜೆಎನ್ಯು ಉಪ ಕುಲಪತಿ ಎಂ. ಜಗದೀಶ್ ಕುಮಾರ್ ಮತ್ತು ಪ್ರೊ-ವಿ.ಸಿ. ಅವರು ಅನಿಲ್ ಬೈಜಾಲ್ ಅವರನ್ನು ಭೇಟಿ ಮಾಡಿ ಪರಿಸ್ಥಿತಿ ಬಗ್ಗೆ ವಿವರಿಸಿದರು.
ಇದೇ ವೇಳೆ, ಕೇಂದ್ರ ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಅವರೂ ಕೂಡ ಜೆಎನ್ಯು ಉನ್ನತಾಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದರು.
ದೇಶ್ಯಾದಂತ ಪ್ರತಿಭಟನೆ: ಜೆಎನ್ಯು ವಿದ್ಯಾರ್ಥಿಗಳ ಮೇಲೆ ನಡೆದ ದಾಳಿ ಖಂಡಿಸಿ ದೆಹಲಿಯ ಐತಿಹಾಸಿಕ ಸ್ವಾರಕಗಳು ಸೇರಿದಂತೆ ದೇಶದ ವಿವಿಧ ರಾಜ್ಯಗಳ ಪ್ರಮುಖ ನಗರಗಳಲ್ಲಿನ ವಿಶ್ಯವಿದ್ಯಾಲಯಗಳು ಮತ್ತು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾರೀ ಪ್ರತಿಭಟನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.