ಬೆಂಗಳೂರು: ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಹಲವು ಕಾರ್ಮಿಕ ಸಂಘಟನೆಗಳು ಮತ್ತು ಎಡಪಕ್ಷಗಳು ಬುಧವಾರ (ಜ.8) ಭಾರತ ಬಂದ್ಗೆ ಕರೆ ನೀಡಿವೆ. ಭಾರತ ಬಂದ್ ಗೆ ಹಲವು ಸಂಘ-ಸಂಸ್ಥೆಗಳು, ಸರ್ಕಾರಿ ಹಾಗೂ ಖಾಸಗಿ ನೌಕರರು ಬೆಂಬಲ ನೀಡಿದ್ದಾರೆ. ಆ ದಿನದ ಪರಿಸ್ಥಿತಿ ಅವಲೋಕಿಸಿ, ಶಾಲಾ-ಕಾಲೇಜಿಗೆ ರಜೆ ನೀಡಲು ಆಯಾ ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗೆಳಿಗೆ ಸೂಚನೆ ನೀಡಲಾಗಿದೆ.
ಕರ್ನಾಟಕ ಸರ್ಕಾರ ಕೂಡ ಆ ದಿನ ಶಾಲಾ-ಕಾಲೇಜುಗಳಿಗೆ, ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ ಮಾಡಿಲ್ಲ. ಸಾರಿಗೆ ಸೇವೆ, ಆರೋಗ್ಯ ಸೇವೆ ಹಾಗೂ ಅಂಗಡಿ-ಮುಂಗಟ್ಟುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಆದರೆ, ಬಂದ್ ಪ್ರಭಾವದ ಮೇಲೆ ಹಲವು ಸೇವೆಗಳು ಸ್ಥಗಿತವಾಗುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರದ ಆರ್ಥಿಕ ನೀತಿ, ಬ್ಯಾಂಕಿಂಗ್ ವ್ಯವಸ್ಥೆ ಸುಧಾರಣೆ ಕ್ರಮಗಳಿಗೆ ವಿರೋಧ, ಕನಿಷ್ಠ ವೇತನ 21 ಸಾವಿರದಿಂದ 24 ಸಾವಿರ ರೂ. ಏರಿಕೆಗೆ ಆಗ್ರಹ, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣಕ್ಕೆ ವಿರೋಧ, ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಹಿಂಪಡೆದುಕೊಳ್ಳಲು ಆಗ್ರಹ, 10 ಸಾರ್ವಜನಿಕ ವಲಯದ ಬ್ಯಾಂಕ್ಗಳನ್ನು ವಿಲೀನಗೊಳಿಸಿ 4 ಅತಿದೊಡ್ಡ ಬ್ಯಾಂಕ್ಗಳಾಗಿ ಪರಿವರ್ತಿಸುವುದಕ್ಕೆ ವಿರೋಧ ವ್ಯಕ್ತಪಡಿಸಿ ಭಾರತ ಬಂದ್ಗೆ ಕರೆ ನೀಡಲಾಗಿದೆ. ಕಾರ್ಮಿಕ ಸಂಘಟನೆಗಳು, ಕೇಂದ್ರ-ರಾಜ್ಯ ಸರ್ಕಾರಿ ನೌಕರರು, ಬ್ಯಾಂಕ್ ನೌಕರರು, ಎಲ್ಐಸಿ ನೌಕರರು, ಸಹಕಾರಿ ಬ್ಯಾಂಕ್ ನೌಕರರು, ಸರ್ಕಾರಿ ಶಿಕ್ಷಕರು ಹಾಗೂ ಸಂಘಟಿತ ವಲಯದ ಕಾರ್ಮಿಕರು ಬಂದ್ಗೆ ಬೆಂಬಲ ನೀಡಿದ್ದಾರೆ. ಹೀಗಾಗಿ ಹಲವು ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಅಲ್ಲದೇ, ಭಾರತ ಬಂದ್ ಯಶಸ್ವಿಗೊಳಿಸುವಂತೆ ಎಡಪಕ್ಷಗಲು ಕರೆ ನೀಡಿವೆ.
ಯಾವೆಲ್ಲಾ ಸೇವೆಗಳು ಇರಲಿದೆ.
ಆ್ಯಪ್ ಆಧಾರಿತ ಕ್ಯಾಬ್ಗಳು, ಕೆಎಸ್ ಆರ್ ಟಿಸಿ, ಬಿಎಂಟಿಸಿ, ಹಾಲು, ಪೇಪರ್, ಆಟೋ ಸೇವೆಗಳು ದೊರೆಯಲಿವೆ. ಆಸ್ಪತ್ರೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಮೆಡಿಕಲ್ ಸ್ಟೋರ್, ತುರ್ತುಸೇವೆ, ಹೋಟೆಲ್ ಸೇವೆ, ಶಾಲಾ-ಕಾಲೇಜು, ಮೆಟ್ರೋ ಸಂಚಾರ, ಎಟಿಎಂ ಸೇವೆ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿಗಳು ಎಂದಿನಂತೆ ತೆರೆದಿರುತ್ತವೆ.
ಯಾವ ಸೇವೆಗಳ ಇರುವುದಿಲ್ಲ.
ಬ್ಯಾಂಕುಗಳು, ಎಲ್ ಐಸಿ ಕಚೇರಿ, ಸಹಕಾರಿ ಬ್ಯಾಂಕ್ಗಳು ಸಹ ಬಂದ್ ಆಗಿರುತ್ತವೆ. ರೈಲು ಸಂಚಾರದಲ್ಲಿ ಭಾಗಶಃ ವ್ಯತ್ಯಾಸ ಉಂಟಾಗಲಿದೆ.