ಬೆಂಗಳೂರು, ಜ.6-ತಮ್ಮ ನಿವಾಸದಲ್ಲಿ ಕಳೆದೆರಡು ದಿನಗಳ ಹಿಂದೆ ನಡೆದ ಹಿರಿಯ ನಾಯಕರ ಸಭೆಯ ಸಮಗ್ರ ಮಾಹಿತಿಯನ್ನು ಎಐಸಿಸಿ ಅಧ್ಯಕ್ಷೆ ಸೋನಿಯಗಾಂಧಿ ಅವರಿಗೆ ರವಾನಿಸಿರುವ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಖುದ್ದು ಭೇಟಿಗಾಗಿ ಸಮಯ ಕೇಳಿದ್ದಾರೆ.
ಸಭೆಯಲ್ಲಿ ನಾಯಕರು ಏನೆಲ್ಲ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಎಷ್ಟು ಮಂದಿ ಹೇಳಿದರು. ಎಂ.ಬಿ.ಪಾಟೀಲ್, ಕೃಷ್ಣಭೆರೇಗೌಡ ಮತ್ತು ಕೆ.ಎಚ್.ಮುನಿಯಪ್ಪ ಅವರ ಪರವಾಗಿ ಎಷ್ಟು ಮಂದಿ ವಕಾಲತ್ತು ವಹಿಸಿದ್ದರು ಎಂಬ ಅಂಶಗಳನ್ನು ವರದಿಯಲ್ಲಿ ಸೇರಿಸಲಾಗಿದೆ.
ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನ, ಶಾಸಕಾಂಗ ಪಕ್ಷದ ಸ್ಥಾನ ಪ್ರತ್ಯೇಕಗೊಳಿಸಬೇಕು ಎಂದು ಕೆಲವರು ಸಲಹೆ ನೀಡಿದ್ದಾರೆ. ಆದರೆ ಇನ್ನು ಕೆಲವು ನಾಯಕರು ಏಕೀಕೃತವಾಗಿರಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ವರದಿಯಲ್ಲಿ ನಮೂದಿಸಲಾಗಿದೆ.
ಇ-ಮೇಲ್ನಲ್ಲಿ ಸುದೀರ್ಘ ಮಾಹಿತಿ ನೀಡಿರುವ ಪರಮೇಶ್ವರ್ ಅವರು ಇನ್ನು ಹಲವು ವಿಷಯಗಳ ಕುರಿತು ಚರ್ಚಿಸಲು ಖುದ್ದು ಭೇಟಿ ಮಾಡಬೇಕಿದೆ. ತಾವು ಸಮಯ ಕೊಟ್ಟರೆ ನಾನು ದೆಹಲಿಗೆ ಬರಲು ಸಿದ್ದನಿದ್ದೇನೆ ಎಂದು ತಿಳಿಸಿದ್ದಾರೆ.