ಬೆಂಗಳೂರು, ಜ.6-ಕಾನೂನು ಬಾಹಿರವಾಗಿ ಡಿ ನೋಟಿಫಿಕೇಷನ್ ನಡೆಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮೇಲಿನ ಅರ್ಜಿ ವಿಚಾರಣೆ ನಾಳೆ ಸುಪ್ರೀಂಕೋರ್ಟ್ ಕೈಗೆತ್ತಿಕೊಳ್ಳಲಿದೆ.
ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೆಂಗಳೂರಿನ ಬೆನ್ನಿಗಾನಹಳ್ಳಿಯಲ್ಲಿ ಕಾನೂನು ಉಲ್ಲಂಘಿಸಿ ಡಿನೋಟಿಫಿಕೇಷನ್ ನಡೆಸಿದ್ದಾರೆಂದು ಆರೋಪಿಸಿ ಸಮಾಜ ಪರಿವರ್ತನಾ ಸಮುದಾಯದ ಮುಖಂಡ ಎಸ್.ಆರ್.ಹಿರೇಮಠ್ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ನಾಳೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ದ್ವಿಸದಸ್ಯ ಪೀಠ ಅರ್ಜಿ ಕೈಗೆತ್ತಿಕೊಳ್ಳಲಿದ್ದು, ಒಂದು ವೇಳೆ ವಿಚಾರಣೆಗೆ ಅನುಮತಿ ನೀಡಿದರೆ ಯಡಿಯೂರಪ್ಪ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಮತ್ತೆ ಕಾನೂನಿನ ಸಂಕಷ್ಟ ಎದುರಾಗುವುದು ಖಚಿತ.
ಸೆಪ್ಟೆಂಬರ್ನಲ್ಲಿ ಸಲ್ಲಿಸಿದ್ದ ಅರ್ಜಿಯು ಇನ್ನೂ ವಿಚಾರಣೆಗೆ ಬಾರದ ಹಿನ್ನೆಲೆ ಸಮಾಜ ಪರಿವರ್ತನಾ ಸಮುದಾಯದ ಪರ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ಗೆ ಮನವಿ ಮಾಡಿದ್ದರು.
ಈಗಾಗಲೇ ಈ ಪ್ರಕರಣದ ಅರ್ಜಿಯನ್ನು ಹೈಕೋರ್ಟ್ 2015ರ ಡಿಸೆಂಬರ್ನಲ್ಲಿ ವಜಾಗೊಳಿಸಿತ್ತು. ಆದರೆ ಪ್ರಕರಣದ ಬಗ್ಗೆ ಮರು ವಿಚಾರಣೆ ನಡೆಸಬೇಕೆಂದು ಸಮಾಜ ಪರಿವರ್ತನಾ ಸಮುದಾಯ ಅರ್ಜಿ ಸಲ್ಲಿಸಿದೆ.
ಪ್ರಕರಣದ ಮೂಲ ಅರ್ಜಿದಾರರಾದ ಕಬ್ಬಾಳೇಗೌಡ ಮತ್ತು ಟಿ. ಅಬ್ರಹಾಂ ಅರ್ಜಿ ಹಿಂಪಡೆದಿದ್ದ ಕಾರಣದಿಂದಾಗಿ ಸೆಪ್ಟೆಂಬರ್ನಲ್ಲಿ ಸಮಾಜ ಪರಿವರ್ತನಾ ಸಮುದಾಯ ಮಧ್ಯಪ್ರವೇಶದ ಅರ್ಜಿ ಸಲ್ಲಿಸಿತ್ತು. ಆದರೆ ಮೂರು ತಿಂಗಳಾದರೂ ಅರ್ಜಿಯು ಇನ್ನೂ ವಿಚಾರಣೆಗೆ ಬಾರದ ಹಿನ್ನೆಲೆಯಲ್ಲಿ ಸಮಾಜ ಪರಿವರ್ತನಾ ಸಮುದಾಯದ ಪರ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಬೆನ್ನಿಗಾನಹಳ್ಳಿಯಲ್ಲಿ 4.20 ಎಕರೆ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುವಂತೆ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠದ ಮುಂದೆ ಮನವಿ ಮಾಡಿದ್ದರು.
ಏನಿದು ಬೆನ್ನಿಗಾನಹಳ್ಳಿ ಡಿನೋಟಿಫಿಕೇಶನ್ ಪ್ರಕರಣ?
ಬೆಂಗಳೂರಿನ ಪೂರ್ವ ಭಾಗದಲ್ಲಿರುವ ಬೆನ್ನಿಗಾನಹಳ್ಳಿಯಲ್ಲಿ 1962ರಲ್ಲಿ ಬಿ.ಕೆ. ಶ್ರೀನಿವಾಸನ್ ಎಂಬುವ ವ್ಯಕ್ತಿ ಖರೀದಿಸಿದ್ದ 5.11 ಎಕರೆ ಭೂಮಿಯ ಪೈಕಿ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ 2010ರ ಮೇ 13ರಂದು ಸ್ವಾಧೀನವಾದ ಜಮೀನಿನ ಪೈಕಿ 4.5 ಎಕರೆ ಜಮೀನನ್ನು ಡಿನೋಟಿಫೈ ಮಾಡಲಾಗಿತ್ತು.
1986ರಲ್ಲಿ ಎನ್ಜಿಇಎಫ್ ಲೇಔಟ್ ನಿರ್ಮಾಣಕ್ಕಾಗಿ ಸರಕಾರ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಆದರೆ, 2003ರಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದಡಿ.ಕೆ. ಶಿವಕುಮಾರ್ ಡಿನೋಟಿಫೈ ಮಾಡಿರುವ ವಿಷಯ ಗೊತ್ತಿದ್ದೂ 1.62 ಕೋಟಿರೂ. ನೀಡಿ ಶ್ರೀನಿವಾಸನ್ಅವರಿಂದ ಈ ಭೂಮಿ ಖರೀದಿಸಿದ್ದರು.
2010ರಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ 29 ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ವಸತಿ ಸಮುಚ್ಚಯ ನಿರ್ಮಿಸುವ ಉದ್ದೇಶಕ್ಕಾಗಿ ಡಿನೋಟಿಫೈ ಮಾಡಿದ್ದರು.
2010ರಲ್ಲಿ ಬೆನ್ನಿಗಾನಹಳ್ಳಿ 4.5 ಎಕರೆಜಾಗವನ್ನು ಡಿ.ಕೆ.ಶಿವಕುಮಾರ್ ಅವರು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿಸಿಕೊಂಡಿದ್ದಾರೆ. ಇದಕ್ಕೆ ಯಡಿಯೂರಪ್ಪ ಅವರು ಸಾಥ್ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಜಮೀನಿನ ಮೂಲ ಮಾಲಿಕ ಕಬ್ಬಾಳೇಗೌಡರು ಲೋಕಾಯುಕ್ತ ನ್ಯಾಯಾಲಯದಲ್ಲಿ ಡಿಕೆಶಿ, ಬಿಎಸ್ವೈ ವಿರುದ್ಧ ದೂರು ಸಲ್ಲಿಸಿದ್ದರು. ಸಿಎಜಿ ವರದಿಯನ್ನು ಆಧರಿಸಿ ಲೋಕಾಯುಕ್ತ ಪೋಲೀಸರು ಎಫ್ಐಆರ್ ದಾಖಲಿಸಿದ್ದರು. ಆದರೆ, 2015ರ ಡಿಸೆಂಬರ್ 18ರಂದು ರಾಜ್ಯ ಹೈಕೋರ್ಟ್ ಈ ಪ್ರಕರಣವನ್ನು ವಜಾಗೊಳಿಸಿತ್ತು.