ಲಾಸ್ ಏಂಜಲೀಸ್: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 2012ರಲ್ಲಿ ನಡೆದ ಅಮೆರಿಕ ರಾಯಭಾರಿಯ ಕಾರಿನ ಸ್ಫೋಟದ ಹಿಂದೆ ಕೂಡ ಇರಾನ್ನ ಸೇನಾ ಮುಖ್ಯಸ್ಥ ಜನರಲ್ ಖಾಸಿಂ ಸುಲೇಮನಿ ಕೈವಾಡವಿತ್ತು ಎಂಬ ಸಂಗತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಿಚ್ಚಿಟ್ಟಿದ್ದಾರೆ.
ಅಮೆರಿಕದ ಪಡೆಗಳು ಶುಕ್ರವಾರ ಇರಾಕ್ ರಾಜಧಾನಿ ಬಾಗ್ದಾದ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದವು. ಈ ವೇಳೆ ಕಾರಿನಲ್ಲಿದ್ದ ಇರಾನ್ ಸೇನಾ ಮುಖ್ಯಸ್ಥ ಖಾಸಿಂ ಸುಲೇಮನಿ ಹಾಗೂ ಸೇನೆಯ ಉಪ ಮುಖ್ಯಸ್ಥ ಅಬು ಮೆಹದಿ ಅಲ್ ಮುಹಂದಿಸ್ ಇಬ್ಬರೂ ಬಲಿಯಾಗಿದ್ದರು.
ಖಾಸಿಂ ಸುಲೇಮನಿ ಹತ್ಯೆಯನ್ನು ಸಮರ್ಥಿಸಿಕೊಂಡಿರುವ ಡೊನಾಲ್ಡ್ ಟ್ರಂಪ್ ಆತ ಭಾರತದ ನವದೆಹಲಿ ಮತ್ತು ಲಂಡನ್ನಲ್ಲಿ ನಡೆದ ಭಯೋತ್ಪಾದನಾ ದಾಳಿಗಳಿಗೂ ಕಾರಣನಾಗಿದ್ದ ಎಂದು ಆರೋಪಿಸಿದ್ದಾರೆ.
ಸುಲೇಮನಿ ಬಾಗ್ದಾದ್ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಗಳ ಮೇಲೆ ದಾಳಿ ನಡೆಸಿ ಅನೇಕ ಅಮಾಯಕರ ಸಾವಿಗೆ ಕಾರಣವಾಗಿದ್ದ. ಅಲ್ಲದೇ ಅಮೆರಿಕ ರಾಯಭಾರಿಗಳು ಮತ್ತು ಸೇನಾಪಡೆ ಅಧಿಕಾರಿಗಳನ್ನು ಕೊಲ್ಲಲು ಸಂಚು ರೂಪಿಸಿದ್ದ. ಭಾರತದ ನವದೆಹಲಿ ಮತ್ತು ಲಂಡನ್ನಂಥ ನಗರಗಳಲ್ಲಿ ನಡೆದ ಉಗ್ರರ ದಾಳಿ ಹಿಂದೆಯೂ ಈತನ ಕೈವಾಡವಿದೆ ಎಂದು ಟ್ರಂಪ್ ಫ್ಲೋರಿಡಾದಲ್ಲಿ ಇಂದು ತಿಳಿಸಿದ್ದಾರೆ.
2012ರ ಫೆಬ್ರವರಿ 13ರಂದು ನವದೆಹಲಿಯಲ್ಲಿ ಕಾರಿನಲ್ಲಿ ಬಾಂಬ್ ಇಟ್ಟು ಸ್ಫೋಟಿಸಿದ್ದರ ಹಿಂದೆಯೂ ಸುಲೇಮನಿ ಕೈವಾಡವಿತ್ತು. ಉಗ್ರರಿಗೆ ಕುಮ್ಮಕ್ಕು ನೀಡಿದ್ದರಿಂದ ಆತನನ್ನು ಕೊಲ್ಲಬೇಕಾಯಿತು. ಇನ್ನಷ್ಟು ಅಮಾಯಕ ಜೀವಗಳು ಬಲಿಯಾಗಬಾರದು ಎಂಬ ಕಾರಣಕ್ಕೆ ವಾಯುದಾಳಿ ನಡೆಸಿ ಆತನನ್ನು ಹತ್ಯೆ ಮಾಡಲಾಯಿತು. ಆತನನ್ನು ಈ ಮೊದಲೇ ಕೊಂದಿದ್ದರೆ ಎಷ್ಟೋ ಜನರ ಪ್ರಾಣ ಉಳಿಯುತ್ತಿತ್ತು ಎಂದು ಟ್ರಂಪ್ ಹೇಳಿದ್ದಾರೆ.
ನಿನ್ನೆ ಬಾಗ್ದಾದ್ನಲ್ಲಿ ವಾಯುದಾಳಿ ನಡೆಸಿರುವ ಬೆನ್ನಲ್ಲೇ ಇಂದು ಮತ್ತೊಮ್ಮೆ ಇರಾಕ್ನಲ್ಲಿ ವಾಯುದಾಳಿ ನಡೆಸಿರುವ ಅಮೆರಿಕ ಸೇನಾಪಡೆ 6 ಜನರನ್ನು ಬಲಿಪಡೆದಿದೆ. ಇರಾಕ್ನ ಹಶೆದ್ ಅಲ್-ಶಾಬಿ ಸೇನಾಪಡೆಯ ವಾಹನಗಳ ಮೇಲೆ ಇಂದು ಬೆಳಗ್ಗೆ ಅಮೆರಿಕ ಸೇನಾಪಡೆ ಮತ್ತೊಮ್ಮೆ ದಾಳಿ ನಡೆಸಿದೆ. ಅಮೆರಿಕದ ಮಿಲಿಟರಿ ಕಾರ್ಯಾಚರಣೆಯಿಂದ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಸುಮಾರು 6 ಜನ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.