ಬೆಂಗಳೂರು: ಕೆಟ್ಟ ಮೇಲೆ ಬುದ್ದಿ ಬಂತು ಎಂಬಂತೆ ಆಗಿದೆ ಸದ್ಯ ಕಾಂಗ್ರೆಸ್ ನಾಯಕರ ಮನಸ್ಥಿತಿ. ಉಪಚುನಾವಣೆ ಸೋಲಿನ ಬಳಿಕ ಎಚ್ಚೆತ್ತಕೊಂಡಿರುವ ಕಾಂಗ್ರೆಸ್ ನಾಯಕರು, ತಮ್ಮ ಆಂತರಿಕ ಭಿನ್ನಾಭಿಪ್ರಾಯಗಳು ಹೀಗೆ ಮುಂದುವರೆದರೆ ಕಷ್ಟ ಎಂದು ಅರಿತು, ಮುನಿಸು ತೊರೆದು ಒಗ್ಗಟ್ಟಿನ ಮಂತ್ರ ಜಪಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಇಂದು ಮಾಜಿ ಡಿಸಿಎಂ ಪರಮೇಶ್ವರ್ ಮನೆಯಲ್ಲಿ ಸಭೆ ನಡೆಸಲು ಮುಂದಾಗಿದ್ದಾರೆ.
ಉಪಚುನಾವಣೆಗೆ ಮುನ್ನ ಪಕ್ಷದಲ್ಲಿ ಮೂಡಿದ್ದ ವಲಸಿಗ ಹಾಗೂ ಮೂಲ ಕಾಂಗ್ರೆಸ್ನಾಯಕರ ನಡುವಿನ ತಿಕ್ಕಾಟ ಪಕ್ಷದ ಸೋಲಿಗೆ ಕಾರಣವೂ ಆಗಿತ್ತು. ಅಧಿಕಾರ, ಪಕ್ಷದ ಚುಕ್ಕಾಣಿಗಾಗಿ ನಾಯಕರ ನಡುವೆ ಮೂಡಿದ ಪ್ರತಿಷ್ಟೆ, ಹಿರಿ-ಕಿರಿ ನಾಯಕರ ಆಂತರಿಕ ಸಂಘರ್ಷಗಳು ಕೂಡ ಉಪಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾರಣವಾಗಿತ್ತು.
ಇದೇ ರೀತಿ ಪಕ್ಷದಲ್ಲಿ ಭಿನ್ನಾಭಿಪ್ರಾಯ ಮುಂದುವರೆದರೆ ಬಿಜೆಪಿ ಇದರ ಲಾಭಾ ಪಡೆಯುವುದು ಖಚಿತ. ಈ ಹಿನ್ನೆಲೆ ಮುನಿಸು ಮರೆತು ಪಕ್ಷದ ಬಲವರ್ಧನೆಗೆ ಮುಂದಾಗಬೇಕು. ಇದಕ್ಕೆ ಏನು ಮಾಡಬೇಕು. ಮುಂದಿನ ನಡೆ ಹೇಗೆ ಎಂಬ ಕುರಿತು ಚರ್ಚೆ ನಡೆಸಲು ಇಂದು ನಾಯಕರು ಸಭೆ ಸೇರಲು ಮುಂದಾಗಿದ್ದಾರೆ.
ಇದಕ್ಕಾಗಿ ಪರಮೇಶ್ವರ್ ಕಾಂಗ್ರೆಸ್ ನಾಯಕರು ಇಂದು ಸಂಜೆ ಕಾಫಿ ಪಾರ್ಟಿಗೆ ಆಹ್ವಾನಿಸಿದ್ದು, ಸಭೆಯಲ್ಲಿ ಸಿದ್ದರಾಮಯ್ಯ, ಬಿಕೆ ಹರಿಪ್ರಸಾದ್, ಮುನಿಯಪ್ಪ, ದಿನೇಶ್ ಗುಂಡೂರಾವ್, ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲೆ ಸೇರಿದಂತೆ ಅನೇಕ ಪ್ರಮುಖರು ಹಾಜರಾಗಲಿದ್ದಾರೆ.