ದುಬೈ : ಮೇಜರ್ ಜನರಲ್ ಖಾಸಿಂ ಸೊಲೆಮನಿಯನ್ನು ಅಮೆರಿಕ ಹತ್ಯೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಇರಾನ್ ಕೆಂಡಕಾರಿದೆ. ಇಂದೊಂದು ಮೂರ್ಖತನದ ನಿರ್ಧಾರ ಎಂದಿರುವ ಇರಾನ್, ಮುಂದಾಗುವ ಪರಿಣಾಮಗಳಿಗೆ ನೀವೇ ಕಾರಣ ಎಂದು ಹೇಳಿದೆ.
ಇರಾನ್ ಮೇಜರ್ ಜನರಲ್ ಖಾಸಿಂ ಸೊಲೆಮನಿಯನ್ನು ಹತ್ಯೆ ಮಾಡಿದ ನಂತರ ಮಾತನಾಡಿದ ಇರಾನ್ ವಿದೇಶಾಂಗ ಸಚಿವ ಮೊಹ್ಮದ್ ಜಾವದ್ ಜಾರಿಫ್, “ಅಮೆರಿಕ ಮೂರ್ಖ ಹಾಗೂ ಅತಿ ಅಪಾಯಕಾರಿ ನಿರ್ಧಾರ ಕೈಗೊಂಡಿದೆ. ಇದರಿಂದ ಉಂಟಾಗುವ ಪರಿಣಾಮಗಳ ಹೊಣೆಯನ್ನು ಅಮೆರಿಕವೇ ಹೊತ್ತುಕೊಳ್ಳಲಿ,” ಎಂದಿದ್ದಾರೆ. ಘಟನೆ ನಂತರದಲ್ಲಿ ಇರಾನ್ ಹಾಗೂ ಅಮೆರಿಕದ ನಡುವೆ ಯುದ್ಧ ಭೀತಿ ಎದುರಾಗಿದೆ. ಇನ್ನು, ಇರಾನ್ನಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ ಘೋಷಣೆ ಮಾಡಲಾಗಿದೆ.
ಶುಕ್ರವಾರ ಬಾಗ್ದಾದ್ ವಿಮಾನ ನಿಲ್ದಾಣದಲ್ಲಿ ಅಮೆರಿಕ ರಾಕೆಟ್ ದಾಳಿ ನಡೆಸಿತ್ತು. ಈ ವೇಳೆ ಖಾಸಿಂ ಸೊಲೆಮನಿ ಜತೆ ಇರಾಕ್ ಬೆಂಬಲಿತ ಮೊಬಿಲೈಜೇಶನ್ ಉಗ್ರ ಪಡೆಯ ಡೆಪ್ಯುಟಿ ಕಮಾಂಡರ್ ಅಬು ಮಹ್ದಿ ಅಲ್ ಮುಹಾಂದಿಸ್ ಕೂಡ ಸತ್ತಿದ್ದಾನೆ.
ಖಾಸಿಂ ಸೊಲೆಮನಿಯನ್ನು ಅಮೆರಿಕ ತನ್ನ ಬದ್ಧ ವೈರಿ ಎಂದೇ ಪರಿಗಣಿಸಿತ್ತು. ಈತ ಇರಾನ್ ಸಶಸ್ತ್ರ ಹೋರಾಟ ನಿಯಂತ್ರಿಸುತ್ತಿದ್ದ. ಸೊಲೆಮನಿ ಇರಾನ್ ಗುಪ್ತಚರ ಇಲಾಖೆಯ ಮುಖ್ಯಸ್ಥ ಕೂಡ ಹೌದು. “ನಿಮಗೆ ಇಷ್ಟಬಂದಾಗ ನೀವು ಯುದ್ಧ ಆರಂಭಿಸಿ. ಆದರೆ, ಅದನ್ನು ಮುಗಿಸುವುದು ಮಾತ್ರ ನಾವೇ,” ಎಂದು ಸೊಲೆಮನಿ ಅಮೆರಿಕಕ್ಕೆ ಬೆದರಿಕೆ ಹಾಕಿದ್ದ. ಈತನನ್ನು ಹೊಡೆದುರುಳಿಸಿಲು ಇದು ಕೂಡ ಒಂದು ಕಾರಣ ಎನ್ನಲಾಗಿದೆ.
ಹೊಸ ವರ್ಷದಂದು ಬಾಗ್ದಾದ್ನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಮೇಲೆ ಇರಾನ್ ಬೆಂಬಲಿತ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ ಅಮೆರಿಕದ ಅಧಿಕಾರಿಯೋರ್ವ ಮೃತಪಟ್ಟಿದ್ದರು. ಇದಾದ ನಂತರ ಎರಡೂ ದೇಶಗಳ ಸಂಬಂಧ ತೀರಾ ಹದಗೆಟ್ಟಿದೆ. ಈಗ ರಾಕೆಟ್ ದಾಳಿಯ ನಂತರ ಯುದ್ಧ ಭೀತಿ ಆರಂಭವಾಗಿದೆ.
ಇನ್ನು, ಈ ದಾಳಿಗೆ ಅಮೆರಿಕ ಸ್ಪಷ್ಟನೆಯನ್ನೂ ನೀಡಿದೆ. ““ಅಮೆರಿಕದ ರಾಯಭಾರಿಗಳನ್ನು ಕೊಲ್ಲಲು ಸೊಲೆಮನಿ ಸಂಚು ರೂಪಿಸಿದ್ದ. ಇರಾಕ್ನಲ್ಲಿರುವ ಅಮೆರಿಕದ ಸಿಬ್ಬಂದಿಯನ್ನು ಕಾಪಾಡುವ ನಿಟ್ಟಿನಲ್ಲಿ ನಾವು ಈ ಕ್ರಮ ಕೈಗೊಂಡಿದ್ದೇವೆ,” ಎಂದು ಪೆಂಟಗನ್ ಹೇಳಿದೆ.