ಬೆಳಗಾವಿ, ಜ.2- ಬೆಳಗಾವಿ ಗ್ರಾಮೀಣ ಮತ ಕ್ಷೇತ್ರ ಮರಾಠಿಗರ ಹಕ್ಕು ಎಂದು ಭಾನುವಾರವಷ್ಟೇ ಹೇಳಿಕೆ ನೀಡಿದ್ದ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಯೂಟರ್ನ್ ಹೊಡೆದಿದ್ದಾರೆ.
ನಾನು ಕನ್ನಡ ವಿರೋಧಿ ಹೇಳಿಕೆ ನೀಡಿಲ್ಲ. ಆ ರೀತಿ ಹೇಳಿಕೆ ನೀಡಿದ್ದರೆ ನಾನು ರಾಜಕೀಯದಲ್ಲಿ ಇರಲು ನಾಲಾಯಕ್ ಎಂದು ತಮ್ಮನ್ನೇ ತಾವು ಹಿಯಾಳಿಸಿಕೊಂಡಿದ್ದಾರೆ.
ಗೋಕಾಕ್ನ ಕನ್ನಡ ಜಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಾರಾಷ್ಟ್ರ ಗಡಿ ಕ್ಯಾತೆ ವಿಷಯದಲ್ಲಿ ನೂರಕ್ಕೆ ನೂರರಷ್ಟು ನಾನು ಕನ್ನಡಿಗರೊಂದಿಗಿದ್ದೇನೆ. ರಾಜ್ಯದ ಒಂದಿಂಚೂ ಜಾಗವನ್ನು ಮಹಾರಾಷ್ಟ್ರಕ್ಕೆ ಹೋಗಲು ಬಿಡುವುದಿಲ್ಲ. ಬೆಳಗಾವಿಯಲ್ಲಿ ನಾನು ಮಾಡಿದ ಭಾಷಣವನ್ನು ತಿರುಚಲಾಗಿದೆ. ಮುಸ್ಲಿಂ, ಕುರುಬ, ಮರಾಠ ಎಲ್ಲರೂ ಬಿಜೆಪಿಗೆ ಬೆಂಬಲಿಸಲಿ ಎಂದು ನಾನು ಕೋರಿಕೊಂಡಿದ್ದೇನೆ.
ಕನ್ನಡಪರ ಹೋರಾಟಕ್ಕೆ ನನ್ನ ಬೆಂಬಲ ಸದಾ ಇದೆ. ಕನ್ನಡ ನಾಡು, ನುಡಿ, ಕನ್ನಡಿಗರಿಗೆ ಅಪಮಾನವಾದರೆ ನಾನು ಯಾವುದೇ ತ್ಯಾಗಕ್ಕಾದರೂ ಸಿದ್ಧನಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯಕ್ಕೆ ಕೆಟ್ಟದ್ದು ಮಾಡಿ ರಾಜಕಾರಣ ಮಾಡುವಂತಹ ಅಗತ್ಯ ನನಗಿಲ್ಲ. ಬಿಜೆಪಿ ಪಕ್ಷದ ಮರಾಠ ಮುಖಂಡರಿಗೆ ನೀವೆಲ್ಲಾ ಒಂದಾಗಬೇಕು. ಇಲ್ಲಿ ನಮಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದೇನೆ ಎಂದು ಸ್ಪಷ್ಟ ಪಡಿಸಿದ್ದಾರೆ.
ರಮೇಶ್ ಜಾರಕಿಹೊಳಿ ಅವರ ಮಾತನ್ನು ವೇದಿಕೆಯ ಮೇಲೆಯೇ ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಸಮರ್ಥಿಸಿಕೊಂಡಿದ್ದಾರೆ. ಕನ್ನಡಕ್ಕೆ ದ್ರೋಹ ಮಾಡುವುದಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವೆ ಎಂದು ರಮೇಶ್ ಹೇಳಿದ್ದಾರೆ. ರಮೇಶ್ ಅವರು ಕನ್ನಡ ವಿರೋಧಿ ಹೇಳಿಕೆ ನೀಡಿಲ್ಲ ಮಾಧ್ಯಮದವರು ಸೃಷ್ಟಿ ಮಾಡಿದ್ದಾರೆ ಎಂದು ನನ್ನ ಬಳಿ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು.