ಬಾಗ್ದಾದ್/ ವಾಷಿಂಗ್ಟನ್, ಜ.3- ಅಮೆರಿಕಾ ಮತ್ತು ಇರಾನ್ ನಡುವೆ ಯುದ್ಧ ಸನ್ನಿವೇಶದಂತಹ ಕಾರ್ಮೋಡ ದಟ್ಟೈಸುತ್ತಿರುವಾಗಲೇ ಇಂದು ನಸುಕಿನಲ್ಲಿ ನಡೆದ ಬಾಗ್ದಾದ್ ವಿಮಾನ ನಿಲ್ದಾಣ ರಸ್ತೆಯಲ್ಲಿ ನಡೆದ ಅಮೆರಿಕ ವಾಯುಪಡೆ ದಾಳಿಯಲ್ಲಿ ಇರಾನ್ ಅತ್ಯುನ್ನತ ಮತ್ತು ಸೇನಾಧಿಕಾರಿ ಕಾಸೆಮ್ ಸೊಲೈಮಾನಿ ಮತ್ತು ಹಶೆಡ್ ನ ಉಪ ಮುಖ್ಯಸ್ಥ ಅಬು ಮಹ್ದಿ ಅಲ್ -ಮುಹಂಡಿಸ್ ಕೊಂದು ಹಾಕಿದೆ.
ಅಮೆರಿಕಾ ವಾಯು ಪಡೆಗಳ ಅತ್ಯಂತ ನಿಖರ ಕ್ಷಿಪ್ರ ದಾಳಿಯಲ್ಲಿ ಈ ಇಬ್ಬರು ಅತ್ಯುನ್ನತ ಅಧಿಕಾರಿಗಳೊಂದಿಗೆ ಇತರ 8 ಮಂದಿ ಹತರಾಗಿದ್ದು, ಅನೇಕರು ಗಾಯಗೊಂಡಿದ್ದಾರೆ.
ಬಾಗ್ದಾದ್ ಇಂಟರ್ನ್ಯಾಷನಲ್ ವಿಮಾನ ನಿಲ್ದಾಣದ ಬಳಿ ನಡೆದ ರಾಕೆಟ್ ದಾಳಿಯಲ್ಲಿ ಅನೇಕ ಕಾರುಗಳು ಛಿದ್ರಗೊಂಡಿವೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚನೆ ಮೇರೆಗೆ ಈ ದಾಳಿ ನಡೆಸಲಾಗಿದೆ. ಇರಾನ್ ಸೇನಾ ಮುಖ್ಯಸ್ಥರು ಅಮೆರಿಕಾ ರಾಜ ತಾಂತ್ರಿಕರು ಮತ್ತು ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಪೂರ್ವ ಯೋಜಿತ ಸಂಚು ರೂಪಿಸಿದ್ದರು. ಅನೇಕರ ಸಾವು-ನೋವುಗಳಿಗೆ ಕಾರಣವಾಗಿರುವ ಈ ಇಬ್ಬರು ಅಧಿಕಾರಿಗಳನ್ನು ಅತ್ಯಂತ ನಿಖರ ದಾಳಿಯಲ್ಲಿ ನಾವು ಹತ್ಯೆ ಮಾಡಿದ್ದೇವೆ ಎಂದು ಅಮೆರಿಕಾ ರಕ್ಷಣಾ ಇಲಾಖೆ ಪೆಂಟಗನ್ ಸ್ಪಷ್ಟಪಡಿಸಿದೆ.
ಇರಾನ್ ಸೇನಾ ಪಡೆಯ ಅತ್ಯಂತ ಪ್ರಮುಖ ಘಟಕವಾದ ಕ್ಯು ದಳದ ಮುಖ್ಯಸ್ಥ ಖಾಸೆಮ್ ಸೊಲೈಮಾನಿ ಅವರು ಕಾರಿನಲ್ಲಿ ಹೋಗುತ್ತಿದ್ದಾಗ ಅದರ ಮೇಲೆ ಗುರಿಯಾಗಿಟ್ಟು ದಾಳಿ ನಡೆಸಲಾಯಿತು.
ಈ ದಾಳಿಯಲ್ಲಿ ಹಶೆಡ್ ನ ಉಪ ಮುಖ್ಯಸ್ಥ ಅಬು ಮಹ್ದಿ ಅಲ್ -ಮುಹಂಡಿಸ್ ಸಹ ಹತರಾಗಿದ್ದಾರೆ ಎಂದು ಪೆಂಟಗನ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಕಳೆದ ಮಧ್ಯರಾತ್ರಿ ನಂತರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕ್ಷಿಪಣಿ ದಾಳಿಗೆ ಒಳಗಾಯಿತು ಎಂದು ಸಹ ಇರಾನ್ ಸೇನೆ ತಿಳಿಸಿದೆ.
ಹ್ಯಾಶೆಡ್ ಬೆಂಗಾವಲು ಪಡೆಯನ್ನು ಗುರಿಯಾಗಿಟ್ಟುಕೊಂಡು ನಡೆಸಿದ ರಾಕೆಟ್ ದಾಳಿಯಲ್ಲಿ ಪ್ರಮುಖ ನಾಯಕರು ಸೇರಿದಂತೆ 8 ಮಂದಿ ಮೃತಪಟ್ಟಿದ್ದಾರೆ ಎಂದು ಭದ್ರತಾ ಮೂಲಗಳು ತಿಳಿಸಿವೆ.
ಹಶೆಡ್ ಹೆಚ್ಚಾಗಿ-ಶಿಯಾ ಸಶಸ್ತ್ರ ಘಟಕಗಳ ಜಾಲವಾಗಿದೆ, ಅವರಲ್ಲಿ ಹಲವರು ಇರಾನ್ ರಾಜಧಾನಿ ಟೆಹ್ರಾನ್ನೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದಾರೆ.
ಇವರನ್ನು ಇರಾಕ್ನ ರಾಜ್ಯ ಭದ್ರತಾ ಪಡೆಗಳಲ್ಲಿ ಅಧಿಕೃತವಾಗಿ ಸೇರಿಸಿಕೊಳ್ಳಲಾಗಿದೆ. ಮುಹಂದಿಸ್ ಅವರು ಹಶೆದ್ ಅವರ ಉಪ ಮುಖ್ಯಸ್ಥರಾಗಿದ್ದು, ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿದ್ದರು. ಇವರನ್ನು ಅಮೆರಿಕಾ ಕಪ್ಪು ಪಟ್ಟಿಗೆ ಸೇರಿಸಿತ್ತು.
ಹತ್ಯೆಗೆ ಟ್ರಂಪ್ ಆದೇಶ: ಇರಾನ್ನ ಕ್ರಾಂತಿಕಾರಿ ಸೇನಾ ಪಡೆಯ ಮುಖ್ಯಸ್ಥ ಖ್ಯಾಸೆಮ್ ಸೊಲೈಮಾನಿಯನ್ನು ಹತ್ಯೆ ಮಾಡಲು ಅಮೆರಿಕಾ ಅಧ್ಯಕ್ಷ ಡೊನಾಲ್ಡï ಟ್ರಂಪ್ ಆದೇಶ ನೀಡಿದ್ದರು ಎಂದು ರಕ್ಷಣಾ ಇಲಾಖೆ ಪೆಂಟಗನ್ ದೃಢಪಡಿಸಿದೆ.
ಇರಾಕ್ನಲ್ಲಿರುವ ಅಮೆರಿಕಾದ ರಾಯಭಾರಿಗಳು ಮತ್ತು ಸೇವಾ ಸದಸ್ಯರ ಮೇಲೆ ದಾಳಿ ನಡೆಸಲು ಜನರಲ್ ಸೊಲೈಮಾನಿ ಯೋಜನೆ ರೂಪಿಸುತ್ತಿದ್ದರು. ಜನರಲ್ ಸೊಲೈಮಾನಿ ಮತ್ತು ಅವರ ಸೇನಾ ಪಡೆ ನೂರಾರು ಅಮೆರಿಕನ್ನರನ್ನು ಮತ್ತು ಸಮ್ಮಿಶ್ರ ಸೇನಾ ಪಡೆಗಳ ಯೋಧರ ಸಾವು-ನೋವುಗಳಿಗೆ ಕಾರಣರಾಗಿದ್ದರು. ಮುಂದೆ ಇವರಿಂದ ನಡೆಯಬಹುದಾಗಿದ್ದ ಮತ್ತಷ್ಟು ಹತ್ಯಾಕಾಂಡಗಳು ಮತ್ತು ವಿಧ್ವಂಸಕ ಕೃತ್ಯಗಳನ್ನು ತಡೆಗಟ್ಟುವ ಉದ್ದೇಶದಿಂದಲೇ ಈ ಸೇನಾಧಿಕಾರಿಗಳನ್ನು ಹೊಡೆದುರುಳಿಸಲಾಗಿದೆ ಎಂದು ಪೆಂಟಗನ್ ಹೇಳಿದೆ.
ಈ ಹಿನ್ನಲೆಯಲ್ಲಿ ತಮ್ಮ ದೇಶದ ರಕ್ಷಣಾ ಪಡೆ ನಾಯಕರು ಮತ್ತು ನಾಗರಿಕರ ರಕ್ಷಣೆಗೆ ಸೊಲೈಮಾನಿ ಹತ್ಯೆಗೆ ಅಮೆರಿಕಾ ಅಧ್ಯಕ್ಷ ಟ್ರಂಪ್ ಆದೇಶ ಹೊರಡಿಸಿದ್ದರು ಎಂದು ರಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ.
ಜನರಲ್ ಸೊಲೈಮಾನ್ ಹತ್ಯೆ ಬಳಿಕ ಅಮೆರಿಕಾ ಧ್ವಜದ ಚಿತ್ರವನ್ನು ಹಾಕಿ ಟ್ರಂಪ್ ಟ್ವೀಟ್ ಮಾಡಿದ್ದಾರೆ. ಆದರೆ ಇದಕ್ಕೆ ಸಂಬಂಧಿಸಿದ ಯಾವುದೇ ಹೇಳಿಕೆ ನೀಡಿಲ್ಲ.
ಇರಾನ್ ಬೆಂಬಲಿತ ರಾಷ್ಟ್ರಗಳು ಅಮೆರಿಕದ ಕೃತ್ಯವನ್ನು ಖಂಡಿಸಿದ್ದು , ಇದರ ವಿರುದ್ಧದ ಹೋರಾಟಕ್ಕೆ ಟೆಹ್ರಾನ್ಗೆ ಸಂಪೂರ್ಣವಾಗಿ ಬೆಂಬ ಘೋಷಿಸಿವೆ.