ಟೆಹರಾನ್, ಜ.3- ಇರಾನ್ನ ಇಸ್ಲಾಮಿಕ್ ರಿಪಬ್ಲಿಕನ್ ಕುಡ್ಸ್ ಫೋರ್ಸ್ನ ಮುಖ್ಯಸ್ಥ ಜನರಲ್ ಖಾಸೆಂ ಸೊಲೆಮಾನಿ ಮತ್ತು ಇತರ ಹತ್ತು ಮಂದಿ ಹತ್ಯೆಗೆ ಕಾರಣರಾದ ಅಮೆರಿಕ ಸೇನಾಪಡೆಗಳ ವಿರುದ್ಧ ಇರಾನ್ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಇರಾಕ್ ರಾಜಧಾನಿ ಬಾಗ್ದಾದ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಮೆರಿಕ ವಾಯುಪಡೆಗಳು ನಡೆಸಿದ ರಾಕೆಟ್ ದಾಳಿಯಲ್ಲಿ ಸೊಲೆಮಾನಿ ಮತ್ತು ಇತರ ಹತ್ತು ಮಂದಿ ಹತರಾದರು.
ಈ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರು ಇರಾನ್ ಅಗ್ರನಾಯಕ ಅಯತೊಲಿಲ್ಲಾ ಅಲ್ ಖಮೇನಿ, ಇದಕ್ಕೆ ಅಮೆರಿಕ ಭಾರೀ ಬೆಲೆ ತೆರಬೇಕಾಗುತ್ತದೆ. ಇದಕ್ಕೆ ಕಾರಣರಾದ ಕ್ರಿಮಿನಲ್ಗಳು ಮತ್ತು ದುಷ್ಟ ಶಕ್ತಿಗಳ ವಿರುದ್ಧ ಉಗ್ರ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಅವರು ಹೇಳಿದ್ದಾರೆ.
ಈ ಕುರಿತು ಪಾರ್ಸಿ ಭಾಷೆಯಲ್ಲಿ ಇಂದು ಬೆಳಗ್ಗೆ ಟ್ವಿಟ್ ಮಾಡಿರುವ ಖಮೇನಿ, ಅಮೆರಿಕ ಸೇನಾಪಡೆ ದಾಳಿಯಲ್ಲಿ ನಮ್ಮ ಅತ್ಯಂತ ಧಕ್ಷ ಮತ್ತು ಸಮರ್ಥ ಸೇನಾ ಅಗ್ರನಾಯಕ ಹುತಾತ್ಮರಾಗಿದ್ದಾರೆ. ಅವರ ತ್ಯಾಗ ವ್ಯರ್ಥವಾಗಲು ನಾವು ಬಿಡುವುದಿಲ್ಲ. ಅವರ ರಕ್ತದಿಂದ ಕೈ ತೊಳೆದಿರುವ ಕ್ರಿಮಿನಲ್ಗಳಿಗೆ ರಕ್ತಪಾತದ ಮೂಲಕವೇ ನಾವು ಉತ್ತರ ಕೊಡುತ್ತೇವೆ ಎಂದು ತಿಳಿಸಿದ್ದಾರೆ.
ಸೊಲೆಮಾನಿ ಹತ್ಯೆ ಹಿನ್ನೆಲೆಯಲ್ಲಿ ಅವರು ಇರಾನ್ನಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಿದ್ದಾರೆ.
ಕುಡ್ಸ್ ಸೇನಾಪಡೆ ಮುಖ್ಯಸ್ಥ ಹತ್ಯೆಯನ್ನು ಖಂಡಿಸಿರುವ ಇರಾನ್ ವಿದೇಶಾಂಗ ವ್ಯವಹಾರಗಳ ಸಚಿವ ಮಾಗಮ್ ಜಾವೇದ್ ಜರೀಷ್, ಇದು ಅತ್ಯಂತ ಅಪಾಯಕಾರಿ ಪ್ರಚೋದನೆಗೆ ಕಾರಣವಾಗಿದೆ. ಅಮೆರಿಕಾ ಸೇನಾಪಡೆಗಳ ವಿರುದ್ಧ ನಮ್ಮ ಯೋಧರು ಖಂಡಿತಾ ಸೇಡು ತೀರಿಸಿಕೊಳ್ಳುತ್ತಾರೆ ಎಂದು ಹೇಳಿದರು.
ಬಹುತೇಕ ಇರಾನ್ನ ಎಲ್ಲಾ ನಾಯಕರು ಮತ್ತು ಸೇಡಾಪಡೆಗಳ ಮಾಜಿ ಮುಖ್ಯಸ್ಥರು ಅಮೆರಿಕದ ದಾಳಿಯನ್ನು ಖಂಡಿಸಿದ್ದು, ಇದರ ವಿರುದ್ಧ ಸೇಡು ತೀರಿಸಿಕೊಳ್ಳಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದಾರೆ.