ಬೆಂಗಳೂರು: ಬಹಳ ವರ್ಷಗಳಿಂದ ಬಾಕಿ ಇರುವ ಹಲವು ಬೇಡಿಕೆಗಳ ಈಡೇರಿಕೆಗಾಗಿ ಮತ್ತೆ ರಸ್ತೆಗಿಳಿದಿರುವ ರಾಜ್ಯದ ನಾನಾ ಜಿಲ್ಲೆಗಳ ಆಶಾ ಕಾರ್ಯಕರ್ತೆಯರು ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರು ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ನತ್ತ ಹೊರಟ ಬೃಹತ್ ರ್ಯಾಲಿಯಲ್ಲಿ ಸಾವಿರಾರು ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. ‘ಗುಲಾಬಿ ತಂಡ‘ದ 10 ಬೇಡಿಕೆಗಳಲ್ಲಿ 7 ಬೇಡಿಕೆಗಳನ್ನು ಈಡೇರಿಸುವುದಾಗಿ ಈಗಾಗಲೇ ಸರ್ಕಾರ ಭರವಸೆ ನೀಡಿದ್ದು, ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಸ್ವಲ್ಪ ಮಟ್ಟಿಗಿನ ಜಯ ಸಿಕ್ಕಂತಾಗಿದೆ.
ಹಾವೇರಿ, ರಾಯಚೂರು, ಹುಬ್ಬಳ್ಳಿ, ಹಿರೇಕೆರೂರು ಸೇರಿ ಹಲವು ಜಿಲ್ಲೆಗಳಿಂದ ಆಶಾ ಕಾರ್ಯಕರ್ತೆಯರು ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಕಳೆದ ವರ್ಷ ಜೂನ್ ತಿಂಗಳಲ್ಲಿ ಕೂಡ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫ್ರೀಡಂಪಾರ್ಕ್ನಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದರು. ಇದೀಗ ಮತ್ತೆ ಪ್ರತಿಭಟನೆ ನಡೆಸುತ್ತಿದ್ದು, 30 ಸಾವಿರಕ್ಕೂ ಅಧಿಕ ಆಶಾ ಕಾರ್ಯಕರ್ತೆಯರು ಪಾಲ್ಗೊಂಡು ತಮ್ಮ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಆಶಾ ಕಾರ್ಯಕರ್ತೆಯರ 10 ಬೇಡಿಕೆಗಳಲ್ಲಿ 7 ಬೇಡಿಕೆಗಳನ್ನು ಈಡೇರಿಸುವುದಾಗಿ ಸಚಿವ ಶ್ರೀರಾಮುಲು ಭರವಸೆ ನೀಡಿದ್ದಾರೆ. ಆಶಾ ಕಾರ್ಯಕರ್ತೆಯರು ತುಂಬ ಕಷ್ಟಪಟ್ಟಿದ್ದಾರೆ. ಅವರ ಜೊತೆ ನಾನು ಚರ್ಚಿಸಿದ್ದೇನೆ. ಕೇಂದ್ರ ಮತ್ತು ರಾಜ್ಯದ ವೇತನವನ್ನು ಒಂದೇ ದಿನ ಬಿಡುಗಡೆ ಮಾಡಲು ಸಮ್ಮತಿ ನೀಡಿದ್ದೇನೆ. ಪ್ರತಿ ತಿಂಗಳು 10ನೇ ತಾರೀಕಿನೊಳಗೆ ವೇತನ ನೀಡಲಾಗುವುದು. ದಯವಿಟ್ಟು ಆಶಾ ಕಾರ್ಯಕರ್ತೆಯರು ಪ್ರತಿಭಟನೆಯನ್ನು ಕೈಬಿಡಬೇಕು ಎಂದು ಶ್ರೀರಾಮುಲು ಮನವಿ ಮಾಡಿದ್ದಾರೆ.
12 ಸಾವಿರ ರೂ. ಮಾಸಿಕ ವೇತನ ನೀಡಬೇಕು ಎಂದು ಆಗ್ರಹ ಮಾಡಲಾಗಿತ್ತು. ಆಶಾ ಕಾರ್ಯಕರ್ತೆಯರಿಗೆ 10 ಸಾವಿರ ರೂ. ವೇತನ ನೀಡಲು ನಾನು ಬದ್ಧನಾಗಿದ್ದೇನೆ. ನಾನೆಷ್ಟು ದಿನ ಸಚಿವನಾಗಿರ್ತೀನೋ ಗೊತ್ತಿಲ್ಲ.ಆದರೆ 10 ಸಾವಿರ ವೇತನ ಕೊಡಲು ಸಿದ್ಧನಿದ್ದೇನೆ. ಈ ಬಗ್ಗೆ ಸಿಎಂ ಜೊತೆ ನಾನು ಚರ್ಚಿಸುತ್ತೇನೆ. ಆಶಾ ಕಾರ್ಯಕರ್ತರ ಜೊತೆ ನಾನಿದ್ದೇನೆ. ಸಾಧ್ಯವಾದಷ್ಟು ಅವರ ಬೇಡಿಕೆಗಳನ್ನು ಈಡೇರಿಸುತ್ತೇನೆ. 10 ಬೇಡಿಕೆಗಳಲ್ಲಿ 7 ಬೇಡಿಕೆಗಳನ್ನು ಈಡೇರಿಸುತ್ತೇನೆ. ಲಿಖಿತ ರೂಪದಲ್ಲಿ ಭರವಸೆ ನೀಡಲು ಸಿದ್ಧ. ಆಶಾ ಕಾರ್ಯಕರ್ತೆಯರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಲು ಬಜೆಟ್ವರೆಗೆ ಕಾಯಬೇಕು. ಈಗ 1 ಸಾವಿರ ರೂ. ಹೆಚ್ಚಳಕ್ಕೆ ಪ್ರಸ್ತಾಪಿಸಿದ್ದೇನೆ ಎಂದು ಹೇಳಿದ್ದಾರೆ.
ಆಶಾ ಕಾರ್ಯಕರ್ತೆಯರ ಬೇಡಿಕೆಗಳೇನು?:
1. ಕೇಂದ್ರ ಮತ್ತು ರಾಜ್ಯ ಸೇರಿ ಮಾಸಿಕ 12,000 ರೂ. ನೀಡಬೇಕು2. ಆಶಾ ಸಾಫ್ಟ್ ಅಥವಾ ಆರ್ಸಿಎಚ್ ಪೋರ್ಟಲ್ ಜೋಡಣೆ ರದ್ದಾಗಬೇಕು.
3. ಎಂಸಿಟಿಎಸ್ ಸೇವೆಗಳ ಪ್ರೋತ್ಸಾಹಧನ ಒಂದೇ ಬಾರಿಗೆ ಪಾವತಿಸಬೇಕು.
4. 15 ತಿಂಗಳ ಬಾಕಿ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು.
5. ಜನಸಂಖ್ಯೆಗೆ ತಕ್ಕಂತೆ ಎಂಸಿಟಿಎಸ್ ಪ್ರೋತ್ಸಾಹಧನ ಹೆಚ್ಚಿಸಬೇಕು.
5. ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕು.
6. ಮಾರಣಾಂತಿಕ ಕಾಯಿಲೆ / ಮರಣ ಹೊಂದಿದರೆ ನೆರವು ನೀಡಬೇಕು.
7. ವಿವಿಧ ಸರ್ವೆಗಳ ಬಾಕಿ ಪ್ರೋತ್ಸಾಹಧನ ಕೂಡಲೇ ಪಾವತಿಸಬೇಕು.
8. ಜಿಲ್ಲಾ ಮತ್ತು ತಾಲೂಕು ಕೇಂದ್ರದ ಸಭೆಗಳಿಗೆ ದಿನಭತ್ಯೆ ಹೆಚ್ಚಿಸಬೇಕು.
9. ದಿನಕ್ಕೆ 300 ರೂ. ನಿಗದಿಪಡಿಸಿ, ಅಂದೇ ಪಾವತಿಸಬೇಕು.
10. ಆಶಾ ಸುಗಮಗಾರರನ್ನು ನೇಮಿಸಿ, ಮಾಸಿಕ 12,000 ರೂ. ಜೊತೆಗೆ ಟಿಎ ನೀಡಬೇಕು.
ಆಶಾ ಕಾರ್ಯಕರ್ತೆಯರ ಪ್ರತಿಭಟನೆ ನಡೆಯುತ್ತಿರುವುದರಿಂದ ಫ್ರೀಡಂ ಪಾರ್ಕ್ ಬಳಿ ಭದ್ರತೆಗಾಗಿ ಸುಮಾರು 300 ಪೊಲೀಸರ ನಿಯೋಜನೆ ಮಾಡಲಾಗಿದೆ. 5 ಕೆಎಸ್ಆರ್ಪಿ ತುಕಡಿ, 3 ಸಿಎಆರ್ ತುಕಡಿಗಳ ನಿಯೋಜನೆ ಮಾಡಲಾಗಿದೆ. ಇಂದು ಬೆಂಗಳೂರಿಗೆ ಆಗಮಿಸುತ್ತಿರುವ ಪ್ರತಿಭಟನಾಕಾರರ ಸಂಖ್ಯೆಯನ್ನು ಗಮನಿಸಿ ನಂತರ ಭದ್ರತೆ ಹೆಚ್ಚಳ ಮಾಡಲಾಗುತ್ತದೆ. 15 ತಿಂಗಳ ಬಾಕಿ ಪ್ರೋತ್ಸಾಹಧನವನ್ನು ಒಂದೇ ಬಾರಿ ಪಾವತಿ ಮಾಡಬೇಕೆಂಬುದು ಕೂಡ ಆಶಾ ಕಾರ್ಯಕರ್ತರ ಬೇಡಿಕೆಯಲ್ಲೊಂದು. ರಾಜ್ಯ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ನಾಗಲಕ್ಷ್ಮೀ ನೇತೃತ್ವದಲ್ಲಿ ಇಂದು ಬಹೃತ್ ಪ್ರತಿಭಟನೆ ನಡೆಯಲಿದೆ.