ತುಮಕೂರು, ಜ.2- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ತುಮಕೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲು ಹೊರಟಿದ್ದ ರೈತರನ್ನು ಇಲ್ಲಿನ ರೈಲ್ವೆ ನಿಲ್ದಾಣದಲ್ಲೇ ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಪಾವಗಡ, ಚಿತ್ರದುರ್ಗ, ಕೊರಟಗೆರೆ, ಕುಣಿಗಲ್ ಮುಂತಾದ ಕಡೆಯಿಂದಲೂ ಪ್ರತಿಭಟನೆ ನಡೆಸಲು ಮುಂದಾಗಿದ್ದ ರೈತರನ್ನು ಪೋಲೀಸರು ತಡೆದಿದ್ದಾರೆ.
ತುಮಕೂರಿನಲ್ಲಿ ನಡೆಯುವ ಕಿಸಾನ್ ಸಮ್ಮಾನ್ ಕಾರ್ಯಕ್ರಮದಲ್ಲಿ ಮೋದಿ ಅವರು ಭಾಗವಹಿಸಲಿದ್ದು, ಕಾರ್ಯಕ್ರಮದ ವೇಳೆ ಕೇಂದ್ರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಪ್ರತಿಭಟನೆ ನಡೆಸಲು ಶಿವಮೊಗ್ಗದಿಂದ ರೈತರು ತುಮಕೂರಿನತ್ತ ತೆರಳಲು ಹೊರಟಿದ್ದರು.
ತುಮಕೂರಿನತ್ತ ಹೊರಟ್ಟಿದ್ದ ರೈತರನ್ನು ನಗರದ ರೈಲ್ವೆ ನಿಲ್ದಾಣದಲ್ಲಿ ತಡೆದ ಪೋಲೀಸರು ವಶಕ್ಕೆ ಪಡೆದಿದ್ದಾರೆ. ಪೋಲೀಸರು ರೈತರನ್ನು ವಶಕ್ಕೆ ಪಡೆಯುತ್ತಿದ್ದಂತೆ ಆಕ್ರೋಶಗೊಂಡ ರೈತರು ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಪೋಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆಯಿತು.
ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತುಮಕೂರಿನಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಗ್ರಾಮೀಣ ಭಾರತವನ್ನು ಮರೆತಿದ್ದಾರೆ. ಮಹತ್ವಾಕಾಂಕ್ಷೆಯ ಪಸಲ್ ಭೀಮಾ ಯೋಜನೆಯಿಂದ ರೈತರಿಗೆ ಲಾಭವಾಗಿಲ್ಲ. ಸ್ವಾಮಿನಾಥನ್ ವರದಿ ಜಾರಿ ಮಾಡುವುದಾಗಿ ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ. ರೈತಪರ ಸರ್ಕಾರ ಎನ್ನುತ್ತಲೇ ರೈತ ವಿರೋಧಿ ಧೋರಣೆಯನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಸಿಎಎ ಮತ್ತು ಎನ್ಆರ್ಸಿ ಜಾರಿಗೆ ತೋರುತ್ತಿರುವ ಉತ್ಸಾಹವನ್ನು ಪ್ರಧಾನಿಮೋದಿ ಅವರು ಸ್ವಾಮಿನಾಥನ್ ವರದಿ ಜಾರಿಗೆ ತೋರುತ್ತಿಲ್ಲ. ತುಮಕೂರು ಜಿಲ್ಲೆಯಲ್ಲಿ ಪ್ರಾರಂಭವಾದ ಫುಡ್ಪಾರ್ಕ್ ಬಾಗಿಲು ಮುಚ್ಚಿದೆ. ರೈತ ವಿರೋಧಿ ಧೊರಣೆ ಖಂಡಿಸಿ ಪ್ರತಿಭಟನೆ ನಡೆಸಲು ಮುಂದಾದ ರೈತರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ಇಂದಿನ ಕಾರ್ಯಕ್ರಮದಲ್ಲಿ ಕಪ್ಪು ಶರ್ಟ್ ಹಾಕಿಕೊಂಡು ಪಾಲ್ಗೊಳ್ಳುವ ಮೂಲಕ ಪ್ರತಿಭಟನೆ ನಡೆಸುತ್ತೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.