ತೈಪೆ, ಜ.2- ಹೆಲಿಕಾಪ್ಟರ್ ಅಪಘಾತದಲ್ಲಿ ತೈವಾನ್ ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಶನ್-ಇ-ಯಿ-ಮಿಂಗ್ (62) ಸೇರಿದಂತೆ 8 ಉನ್ನತಾಧಿಕಾರಿಗಳು ಮೃತಪಟ್ಟು ಕೆಲವರು ಗಾಯಗೊಂಡಿರುವ ಘಟನೆ ರಾಜಧಾನಿ ತೈಪೆ ಹೊರ ವಲಯದಲ್ಲಿ ಇಂದು ಮುಂಜಾನೆ ಸಂಭವಿಸಿದೆ.
ಪರ್ವತಮಯ ಪ್ರದೇಶದಲ್ಲಿ ಅಪಘಾತಕ್ಕೀಡಾದ ಯುಎಚ್-60ಎಂ ಬ್ಲಾಕ್ ಹಾಕ್ ಯುದ್ಧ ಹೆಲಿಕಾಪ್ಟರ್ನಿಂದ ಇತರ ಐವರು ಅಧಿಕಾರಿಗಳನ್ನು ರಕ್ಷಿಸಲಾಗಿದೆ.
ರಾಜಧಾನಿ ತೈಪೆಯಿಂದ ಈಶಾನ್ಯನಗರಿ ಇಲಾನ್ನಲ್ಲಿ ಇಂದು ಬೆಳಗ್ಗೆ ಏರ್ಪಡಾಗಿದ್ದ ಹೊಸವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಿಂಗ್ ಮತ್ತು ಇತರ 12 ಮಂದಿ ಸೇನಾ ಸಿಬ್ಬಂದಿ ಬ್ಲಾಕ್ ಹಾಕ್ ಹೆಲಿಕಾಪ್ಟರ್ನಲ್ಲಿ ತೆರಳುತ್ತಿದ್ದರು. ಇದರಲ್ಲಿ ಇನ್ನು ಕೆಲವು ಉನ್ನತಾಧಿಕಾರಿಗಳು ಸಹ ಇದ್ದರು.
ಹೆಲಿಕಾಪ್ಟರ್ ತೈಪೆಯಿಂದ ಮೇಲೇರಿದ ಸ್ವಲ್ಪ ಹೊತ್ತಿನಲ್ಲೇ ರೇಡಾರ್ನಿಂದ ಸಂಪರ್ಕ ಕಳೆದುಕೊಂಡಿತು. ನಂತರ ಪರ್ವತಮಯ ಪ್ರದೇಶದಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿರುವುದು ಪತ್ತೆಯಾಯಿತು.
ರಕ್ಷಣಾ ಕಾರ್ಯಕರ್ತರು ಅಪಘಾತಕ್ಕೀಡಾದ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ತೈಪೆ ಸೇನಾ ಮುಖ್ಯಸ್ಥ ಹಾಗೂ ಇತರ 8 ಸೇನಾಧಿಕಾರಿಗಳು ಮೃತಪಟ್ಟಿದ್ದಾರೆ ಎಂದು ರಕ್ಷಣಾ ಸಚಿವಾಲಯ ಖಚಿತಪಡಿಸಿದೆ.
ಈ ದುರ್ಘಟನೆಯಲ್ಲಿ ಗಾಯಗೊಂಡ ಐವರು ಸೇನಾಧಿಕಾರಿಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತೈವಾನ್ ವಾಯುಪಡೆಯ ಮಹಾ ದಂಡ ನಾಯಕರೂ ಆಗಿರುವ ಮಿಂಗ್ ಅತ್ಯಂತ ದಕ್ಷ ಮತ್ತು ಸಮರ್ಥ ಅತ್ಯುನ್ನತ ಸೇನಾಧಿಕಾರಿಯಾಗಿದ್ದರು. ಗಡಿಭಾಗದಲ್ಲಿ ಚೀನಿ ಸೇನೆ ಪದೇ ಪದೇ ತೆಗೆಯುತ್ತಿದ್ದ ಕ್ಯಾತೆಗೆ ದಿಟ್ಟ ಪ್ರತ್ಯುತ್ತರ ನೀಡಿ ಕಮ್ಯುನಿಸ್ಟ್ ದೇಶಕ್ಕೆ ಸೆಡ್ಡು ಹೊಡೆದಿದ್ದರು.
ಮಿಂಗ್ ದುರಂತ ಸಾವಿಗೆ ತೈವಾನ್ನ ಗಣ್ಯಾತಿಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.