ದೆಹಲಿ/ ಪುಣೆ, ಜ.3- ಬಹು ಕೋಟಿ ರೂ.ಗಳ ಅಗಸ್ಟಾ-ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ಗಳ ಖರೀದಿ ಹಗರಣದಲ್ಲಿ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಅಧಿಕಾರಿಗಳು ದೆಹಲಿ ಮತ್ತು ಪುಣೆಯ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕ ಕಾಲಕ್ಕೆ ದಾಳಿ ನಡೆಸಿದ್ದಾರೆ.
ದಾಳಿಗಳ ವೇಳೆ ಈ ಹಗರಣಕ್ಕೆ ಸಂಬಂಧಪಟ್ಟ ಮಹತ್ವದ ದಾಖಲೆ, ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು , ಕೆಲವರನ್ನು ವಿಚಾರಣೆಗೊಳಪಡಿಸಲಾಗಿದೆ.
ಹೆಲಿಕಾಪ್ಟರ್ಗಳ ಖರೀದಿ ಹಗರಣ ಮತ್ತು ತೆರಿಗೆ ವಂಚನೆ ಪ್ರಕರಣದಲ್ಲಿ ಈಗಾಗಲೇ ಆರೋಪಿಗಳಾಗಿ ಹೆಸರಿಸಲ್ಪಟ್ಟವರು , ಅವರ ಬಂಧು ಮಿತ್ರರು ಮತ್ತು ಪುಣೆಯ ಹೆಸರಾಂತ ಉದ್ಯಮಿಯೊಬ್ಬರ ಮನೆ ಮತ್ತು ಕಚೇರಿಗಳ ಮೇಲೆ ಏಕ ಕಾಲದಲ್ಲಿ ದಾಳಿ ನಡೆಸಿದ ಐಟಿ ಇಲಾಖೆ ಅಧಿಕಾರಿಗಳು ವ್ಯಾಪಕ ಶೋಧ ನಡೆಸಿ ಕೆಲವು ಮಹತ್ವದ ದಾಖಲೆ ಪತ್ರಗಳು ಮತ್ತು ದಸ್ತಾವೇಜುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಹಗರಣದಲ್ಲಿ ಈಗಾಗಲೇ ಬಂಧಿತನಾಗಿರುವ ಪ್ರಮುಖ ಆರೋಪಿ ರಾಜೀವ್ ಸಕ್ಸೇನಾ ವೇಳೆ ನೀಡಿದ ಕೆಲವು ಮಾಹಿತಿಗಳನ್ನು ಆಧರಿಸಿ ಈ ದಾಳಿ ಮತ್ತು ಶೋಧ ನಡೆಸಲಾಗಿದೆ.
ದಾಳಿ ವೇಳೆ ಪತ್ತೆಯಾದ ಕೆಲವು ದಾಖಲೆ ಪತ್ರಗಳು ಮತ್ತು ವಿಚಾರಣೆಯಿಂದ ಲಭಿಸಿದ ಮಾಹಿತಿಗಳ ಆಧಾರದ ಮೇಲೆ ಮತ್ತಷ್ಟು ದಾಳಿ ನಡೆಯುವ ನಿರೀಕ್ಷೆ ಇದೆ.