ಬೆಂಗಳೂರು,ಜ.2- ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಹಾಗೂ ರೈಲ್ವೆ ಪ್ರಯಾಣ ದರ ಏರಿಕೆಯಾದ ಬೆನ್ನಲ್ಲೇ ಇದೀಗ ನಗರದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟುವುದು ಬಹುತೇಕ ಖಚಿತವಾಗಿದೆ.
ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬೆಂಗಳೂರು ಜಲಮಂಡಳಿಯವರು ಶೀಘ್ರದಲ್ಲೇ ನೀರಿನ ಹಾಲಿ ದರವನ್ನು ಪರಿಷ್ಕರಣೆ ಮಾಡಲು ಮುಂದಾಗಿದ್ದು, ಸದ್ಯದಲ್ಲೇ ನೀರಿನ ದರ ಏರಿಕೆಯಾಗುವ ಸಾಧ್ಯತೆ ಇದೆ.
ಈ ಸಂಬಂಧ ಜಲಮಂಡಳಿ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಪ್ರಸ್ತುತ ಮಂಡಳಿಯನ್ನು ನಿರ್ವಹಣೆ ಮಾಡಲು ಹಣಕಾಸು ಮುಗ್ಗಟ್ಟು ಎದುರಾಗಿರುವುದರಿಂದ ಶೇ.30ರಿಂದ 35ರಷ್ಟು ನೀರಿನ ದರ ಏರಿಕೆ ಮಾಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ.
ಜಲಮಂಡಳಿ ಅಧಿಕಾರಿಗಳು, ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ಈ ಪ್ರಸ್ತಾವನೆ ಕಡತ ಮುಖ್ಯಮಂತ್ರಿಗಳ ಕಚೇರಿ ತಲುಪಿದೆ ಎಂದು ತಿಳಿದುಬಂದಿದೆ.
ಬೆಂಗಳೂರು ಜಲಮಂಡಳಿ ಪ್ರಸ್ತುತ ಮುಖ್ಯಮಂತ್ರಿ ಯಡಿಯೂರಪ್ಪನವರೇ ನೋಡಿಕೊಳ್ಳುತ್ತಿರುವುದರಿಂದ ಈ ವಾರದಲ್ಲಿ ಅಧಿಕಾರಿಗಳು ಸಭೆ ಕರೆದು ನೀರಿನ ದರ ಏರಿಕೆ ಮಾಡುವ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ಗೃಹ, ವಾಣಿಜ್ಯ ಮತ್ತು ಕೈಗಾರಿಕೆ ಸೇರಿದಂತೆ ಬೇರೆ ಬೇರೆ ಉದ್ದೇಶಗಳಿಗೆ ಬಳಸುವ ನೀರಿನ ಮಾಸಿಕ ಶುಲ್ಕವು ಕಡಿಮೆಯಾಗಿದೆ. ಪ್ರಸ್ತುತ ಮಾಸಿಕವಾಗಿ ಜಲಮಂಡಳಿಗೆ ನೂರು ಕೋಟಿ ರೂ. ಆದಾಯ ಸಂಗ್ರಹವಾಗುತ್ತಿದೆ. ಇದರಲ್ಲಿ 60 ಕೋಟಿಗೂ ಹೆಚ್ಚು ಹಣ ವಿದ್ಯುತ್ ಶುಲ್ಕಕ್ಕೆ ಪಾವತಿ ಮಾಡಬೇಕು. ಕಚೇರಿ ನಿರ್ವಹಣೆ, ಸಿಬ್ಬಂದಿ ವೇತನ, ಪೈಪ್ಗಳ ದುರಸ್ತಿ ಸೇರಿದಂತೆ ಪ್ರತಿ ತಿಂಗಳ ನಿರ್ವಹಣೆಗೆ ಹಣದ ಸಮಸ್ಯೆ ಇರುವುದರಿಂದ ದರ ಏರಿಕೆ ಅನಿವಾರ್ಯ ಎಂದು ಅಧಿಕಾರಿಗಳು ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
ಈ ಹಿಂದೆ 2013ರಲ್ಲಿ ಮಾತ್ರ ನೀರಿನ ದರವನ್ನು ಏರಿಕೆ ಮಾಡಲಾಗಿತ್ತು. ತದನಂತರ ದರವನ್ನು ಪರಿಷ್ಕರಿಸಲು ಸಾಧ್ಯವಾಗಿಲ್ಲ. ಈಗಿರುವ ನಿರ್ವಹಣೆಗೂ ಬಳಕೆದಾರರ ಶುಲ್ಕ ಪಾವತಿಗೂ ಅಜಗಜಾಂತರ ವ್ಯತ್ಯಾಸ ಇರುವುದರಿಂದ ದರ ಏರಿಸುವುದು ಅನಿವಾರ್ಯ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
2013ರ ಜುಲೈನಲ್ಲಿ ದರವನ್ನು ಪರಿಷ್ಕರಣೆ ಮಾಡಲಾಗಿತ್ತು. ಆ ವೇಳೆ ಅಪಾರ್ಟ್ಮೆಂಟ್ಗಳು, ಕೇಂದ್ರ-ರಾಜ್ಯ ಸರ್ಕಾರಗಳ ವಸತಿಗೃಹಗಳು, ವಿಲ್ಲಾಗಳಿಗೆ ಅನ್ವಯವಾಗುವಂತೆ ದರ ಏರಿಕೆ ಮಾಡಿದ್ದೆವು. ಪ್ರಸ್ತುತ ವಾಣಿಜ್ಯ ಬಳಕೆ, ಗೃಹ ಬಳಕೆ, ಖಾಸಗಿದಾರರು, ಅಪಾರ್ಟ್ಮೆಂಟ್ಗಳು, ಕೈಗಾರಿಕೆಗಳಿಗೆ ಹಾಲಿ ಇರುವ ದರವನ್ನು ಪರಿಷ್ಕರಿಸಲೇಬೇಕು.
ನೌಕರರ ವೇತನ, ವಿದ್ಯುತ್ ದರ, ಕಾರ್ಯಾಚರಣೆ, ನಿರ್ವಹಣೆ ವೆಚ್ಚ, ಇಂಧನ ದರ ಏರಿಕೆ ಅಂಶಗಳನ್ನು ಪರಿಗಣಿಸಿ ಸರ್ಕಾರ ದರ ಏರಿಕೆಗೆ ಅನುಮತಿ ನೀಡಬೇಕು.
1200 ಚದರ ಅಡಿ ಕೇಂದ್ರದಲ್ಲಿ ಒಂದು ಮಹಡಿಗಿಂತ ಹೆಚ್ಚು ನಿರ್ಮಿಸುವ ಅಥವಾ ಒಂದೇ ಕಟ್ಟಡದಲ್ಲಿ 3 ಅಡುಗೆ ಕೋಣೆಗಳಿದ್ದರೆ ಪ್ರತಿ ಚದರ ಮೀಟರ್ಗೆ ವಿಧಿಸಲಾಗುತ್ತಿದ್ದ ಶುಲ್ಕವನ್ನು 250ರಿಂದ 400 ರೂ.ಗೆ ಹೆಚ್ಚಿಸಬೇಕು. ಈ ಪ್ರಸ್ತಾವನೆಯನ್ನು ಸರ್ಕಾರ ಒಪ್ಪಿಕೊಳ್ಳದಿದ್ದರೆ ಮಂಡಳಿ ನಿರ್ವಹಣೆ ಮಾಡುವುದು ಕಷ್ಟವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿವಿಧ ಯೋಜನೆಗಳಿಗೆ ಬಿಡ್ಬ್ಲ್ಯೂಎಸ್ಎಸ್ಬಿ 1600 ಕೋಟಿ ಸಾಲ ಮಾಡಿದೆ. ಅದರ ಅಸಲು ಮತ್ತು ಬಡ್ಡಿ ಪಾವತಿಗೆ ಹಣ ಬೇಕಾಗುತ್ತದೆ. ಈ ಆರ್ಥಿಕ ಹೊರೆಯನ್ನು ಸರಿದೂಗಿಸಲು ನೀರಿನ ದರ ಹೆಚ್ಚಿಸುವಂತೆ ಕೋರಿದ್ದಾರೆ.
ಮಂಡಳಿಯು ಗೃಹ ಬಳಕೆಗೆ ಸರಬರಾಜು ಮಾಡುತ್ತಿರುವ ನೀರಿಗೆ 100ರಿಂದ 135( ತಿಂಗಳಿಗೆ 8 ಸಾವಿರ ಲೀಟರ್ವರೆಗೆ ಕಾವೇರಿ ನೀರು) ರೂ. 200ರಿಂದ 240 ರೂ. 8 ಸಾವಿರ ಲೀಟರ್ ಕೊಳವೆಬಾವಿ 200 ರೂ. ಹೆಚ್ಚಿಸಬೇಕು ಇದು ಅತಿ ತುರ್ತಾಗಿ ತೆಗೆದುಕೊಳ್ಳಬೇಕಾದ ತೀರ್ಮಾನ ಎಂದು ಹೇಳಿದ್ದಾರೆ.
ಇನ್ನು ಮುಂದೆ ಹೊಸದಾಗಿ ನಿರ್ಮಾಣವಾಗುವ ವಸತಿ ಕಟ್ಟಡ, ಅಪಾರ್ಟ್ಮೆಂಟ್, ವಸತಿ ಸಮುಚ್ಚಯ, ವಾಣಿಜ್ಯ ಕಟ್ಟಡಗಳು ಸೇರಿದಂತೆ ಎಲ್ಲಾ ಮಾದರಿಯ ಕಟ್ಟಡಗಳಿಗೆ ನೀರಿನ ಸಂಪರ್ಕ ಕಲ್ಪಿಸಲು ಏಕಕಂತಿನಲ್ಲಿ ಪಾವತಿಸುವಂತಹ ಶುಲ್ಕವನ್ನು ಪರಿಷ್ಕರಿಸಬೇಕೆಂಬ ಪ್ರಸ್ತಾವನೆಯನ್ನು ಮುಂದಿಟ್ಟಿದೆ.
ದರ ಏರಿಕೆ ಸಾದ್ಯತೆ:
ಜಲಮಂಡಳಿ ಸಲ್ಲಿಸಿರುವ ಪ್ರಸ್ತಾವನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಶೇ.15ರಿಂದ 20ರಷ್ಟು ದರವನ್ನು ಹೆಚ್ಚಳ ಮಾಡಲು ಗಂಭೀರ ಚಿಂತನೆ ಇಟ್ಟಿದೆ.
ಕಾವೇರಿ ನದಿಯಿಂದ ಗ್ರಾಹಕನ ಮನೆಗೆ 1000 ಲೀಟರ್ ನೀರು ಪೂರೈಕೆ ಮಾಡಿದರೆ 36 ರೂ. ಖರ್ಚು ಬರುತ್ತದೆ. ಸದ್ಯ 8 ಸಾವಿರ ಲೀಟರ್ ಒಳಗಿನ ಬಳಕೆದಾರರಿಗೆ ಪ್ರತಿ ಸಾವಿರ ಲೀಟರ್ಗೆ 6 ರೂ., 8ರಿಂದ 15 ಸಾವಿರ ಲೀಟರ್ ಒಳಗಿನ ಬಳಕೆದಾರರಿಗೆ ಪ್ರತಿ ಸಾವಿರ ಲೀಟರ್ಗೆ 9 ರೂ. ಹಾಗೂ 25ರಿಂದ 50 ಸಾವಿರ ಲೀಟರ್ ಬಳಕೆದಾರರಿಗೆ ಪ್ರತಿ ಸಾವಿರ ಲೀಟರ್ಗೆ 15 ರೂ. ಶುಲ್ಕ ವಿಧಿಸಲಾಗುತ್ತಿದೆ.
ನಾವು ವಿಧಿಸುತ್ತಿರುವ ಶುಲ್ಕ ಕಡಿಮೆಯಾಗಿರುವುದರಿಂದ ದರ ಏರಿಕೆ ಅನಿವಾರ್ಯ ಎಂದು ಜಲಮಂಡಳಿ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಈಗಾಗಲೇ ಅಗತ್ಯ ವಸ್ತುಗಳು, ಪೆಟ್ರೋಲ್, ಡೀಸೆಲ್, ರೈಲ್ವೆ ಪ್ರಯಾಣ ಬೆಲೆ ಏರಿಕೆಯಿಂದ ಬಳಲಿರುವ ಜನತೆಗೆ ರಾಜ್ಯ ಸರ್ಕಾರ ನೀರಿನ ದರ ಹೆಚ್ಚಳ ಮಾಡಿ ಮತ್ತೊಂದು ದರ ಭಾರ ಹೊರಸಲಿದೆಯೇ ಎಂಬ ಪ್ರಶ್ನೆ ಎದುರಾಗಿದೆ.