ಬೆಂಗಳೂರು: ಭಾನುವಾರ ಬೆಳಗ್ಗೆ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಸೂತಕದ ಛಾಯೆ. ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಗಳ ಕಣ್ಮರೆ, ಭಕ್ತಗಣದಲ್ಲಿ ತಲ್ಲಣ ಮೂಡಿಸಿತು. ಕೆಲ ದಿನಗಳಿಂದ ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಗಳನ್ನು, ಭಾನುವಾರ ಬೆಳಗಿನ ಜಾವ ಉಡುಪಿ ಕೃಷ್ಣಮಠಕ್ಕೆ ಕರೆತರಲಾಯ್ತು. ಶ್ರೀಗಳ ಕೊನೆಯ ಆಸೆಯಂತೆ, ಶ್ರೀಮಠದಲ್ಲೇ ಅವರು ವಿಧಿವಶರಾದರು. ವೈದ್ಯರು ಮಠದಲ್ಲೇ ಚಿಕಿತ್ಸೆ ಮುಂದುವರೆಸಿದ್ದರಾದರೂ, ಚಿಕಿತ್ಸೆ ಫಲಕಾರಿಯಾಗದೆ 88 ವರ್ಷ ವಯಸ್ಸಿನ ಪೇಜಾವರ ಶ್ರೀಗಳು ಇಹಲೋಕ ತ್ಯಜಿಸಿದರು.
ಉಡುಪಿ ಮಠದ ಸಂಪ್ರದಾಯದಂತೆ ನಗಾರಿ ಬಾರಿಸಿ ವಿಶ್ವೇಶ ತೀರ್ಥ ಶ್ರೀಗಳು ಇನ್ನಿಲ್ಲ ಎಂದು ಘೋಷಿಸಲಾಯ್ತು. ಬಳಿಕ ಪೇಜಾವರ ಕಿರಿಯ ಶ್ರೀ ಹಾಗೂ ಶಿಷ್ಯರು, ತಮ್ಮ ಗುರುಗಳಿಗೆ ಸಂಪ್ರದಾಯದಂತೆ ಪೂಜೆ ಸಲ್ಲಿಸಿದರು. ಬಳಿಕ ಶ್ರೀಮಠದಿಂದ ಜಿಲ್ಲಾ ಕ್ರೀಡಾಂಗಣಕ್ಕೆ ಪೇಜಾವರ ಶ್ರೀಗಳ ಪಾರ್ಥಿವ ಶರೀರದ ಮೆರವಣಿಗೆ ಮಾಡಲಾಯ್ತು.
ಭಾನುವಾರ ಮಧ್ಯಾಹ್ನದ ವೇಳೆಗೆ ಉಡುಪಿಯ ಹೆಲಿಪ್ಯಾಡ್ನಿಂದ ಬೆಂಗಳೂರಿಗೆ ವಿಶೇಷ ಹೆಲಿಕಾಪ್ಟರ್ನಲ್ಲಿ ಪೇಜಾವರ ಶ್ರೀಗಳ ಪಾರ್ಥಿವ ಶರೀರವನ್ನು ರವಾನಿಸಲಾಯಿತು. ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಶ್ರೀಗಳ ಪಾರ್ಥಿವ ಶರೀರ ಆಗಮಿಸುವ ವೇಳೆಗಾಗಲೇ ಸಿಎಂ ಯಡಿಯೂರಪ್ಪ ಕೂಡಾ ಎಚ್ಎಎಲ್ಗೆ ಆಗಮಿಸಿದ್ದರು. ಬಳಿಕ, ನ್ಯಾಷನಲ್ ಕಾಲೇಜ್ ಮೈದಾನಕ್ಕೆ ವಿಶ್ವೇಶತೀರ್ಥರ ಪಾರ್ಥಿವ ಶರೀರವನ್ನು ತರಲಾಯ್ತು. ಮೈದಾನದಲ್ಲಿ ಸೇರಿದ್ದ ಸಾವಿರಾರು ಭಕ್ತರು ಶ್ರೀಗಳ ಅಂತಿಮ ದರ್ಶನ ಪಡೆದರು.
ಸಂಜೆ 6 ಗಂಟೆ ವೇಳೆಗೆ ಪೇಜಾವರರ ಪಾರ್ಥಿವ ಶರೀರವನ್ನು ವಿದ್ಯಾಪೀಠಕ್ಕೆ ರವಾನೆ ಮಾಡಲಾಯ್ತು. ಆದ್ರೆ, ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಸಾಕಷ್ಟು ಭಕ್ತರು ಶ್ರೀಗಳ ಅಂತಿಮ ದರ್ಶನ ಸಿಗದೆ ಬೇಸರ ಮಾಡಿಕೊಂಡರು. ಆದ್ರೆ, ಸಮಯಾವಕಾಶ ಇಲ್ಲದ ಕಾರಣ, ಶ್ರೀಗಳ ಪಾರ್ಥಿವ ಶರೀರವನ್ನುತ್ವರಿತವಾಗಿ ವಿಶೇಷ ವಾಹನದಲ್ಲಿ ವಿದ್ಯಾಪೀಠಕ್ಕೆ ರವಾನೆ ಮಾಡಲಾಯ್ತು.
ವಿದ್ಯಾಪೀಠಕ್ಕೆ ಶ್ರೀಗಳ ಪಾರ್ಥಿವ ಶರೀರವನ್ನು ತಂದ ಬಳಿಕ ಮೊದಲಿಗೆ ಸ್ನಾನ ಮಾಡಿಸಲಾಯಿತು. ನಂತರ ಗೋಪಿ ಚಂದನ ಲೇಪಿಸಿ ಮುದ್ರಾಧಾರಣೆ ಮಾಡಲಾಯ್ತು. ಅವರ ದೇಹವನ್ನು ಬೆತ್ತದ ಬುಟ್ಟಿಯಲ್ಲಿ ಇರಿಸಿ ವಿದ್ಯಾಪೀಠದ ಸುತ್ತ ಪ್ರದಕ್ಷಿಣೆ ಮಾಡಿಸಲಾಯ್ತು. ಸಂಪ್ರದಾಯದಂತೆ ಶ್ರೀಕೃಷ್ಣ ದೇವಸ್ಥಾನದಲ್ಲಿ ಅವರ ಕೈಯಿಂದಲೇ ಪೂಜೆ ಮಾಡಿಸಲಾಯ್ತು.
ಎಲ್ಲ ಧಾರ್ಮಿಕ ವಿಧಿವಿಧಾನಗಳ ಬಳಿಕ ವಿದ್ಯಾಪೀಠದ ಆವರಣದಲ್ಲಿ ಇರುವ ಶ್ರೀಕೃಷ್ಣನ ದೇವಸ್ಥಾನ ಪಕ್ಕ ತೋಡಲಾಗಿದ್ದ ಗುಂಡಿಯಲ್ಲಿ ಶ್ರೀಗಳನ್ನು ಸ್ವಸ್ತಿಕಾಸನದಲ್ಲಿ ಜಪ ಮಾಡುವ ಭಂಗಿಯಲ್ಲಿ ಕೂರಿಸಲಾಯಿತು. ಶ್ರೀಗಳ ಬ್ರಹ್ಮರಂಧ್ರಕ್ಕೆ ತೆಂಗಿನಕಾಯಿ ಇಡಲಾಯ್ತು. ವಿಷ್ಣು ಸಾಲಿಗ್ರಾಮ, ಗಿಂಡಿ, ತುಳಸಿ ಮಾಲೆ, ಪೂಜಾ ಸಾಮಗ್ರಿ ಇಡಲಾಯ್ತು. ಬಳಿಕ ಸಾಸಿವೆ, ಉಪ್ಪು, ಹತ್ತಿಯನ್ನು ತುಂಬಿ ಗುಂಡಿಯನ್ನು ಮುಚ್ಚಲಾಯ್ತು. ಆ ನಂತರ ಬೇರೆ ಪುಣ್ಯ ಕ್ಷೇತ್ರಗಳಿಂದ ತಂದ ಮಣ್ಣನ್ನೂ ಕೂಡಾ ಹಾಕಲಾಯ್ತು. ಅಂತಿಮವಾಗಿ ಅದರ ಮೇಲೆ ಬೃಂದಾವನವನ್ನು ಇರಿಸಲಾಯ್ತು. ಈ ಬೃಂದಾವನದ ಮೇಲೆ ರಂದ್ರವಿರುವ ಪಾತ್ರೆ ಇಟ್ಟು ಅದರೊಳಗೆ ಸಾಲಿಗ್ರಾಮ ಇರಿಸಲಾಯ್ತು. ಪ್ರತಿ ದಿನ ಶ್ರೀಕೃಷ್ಣನ ಪೂಜೆ ಮಾಡಿದ ಬಳಿಕ ಪವಿತ್ರ ತೀರ್ಥವನ್ನು ಸಾಲಿಗ್ರಾಮಕ್ಕೆ ಸುರಿಯಲಾಗುತ್ತದೆ. ಆ ತೀರ್ಥ ಶ್ರೀಗಳ ದೇಹದ ಮೇಲೆ ಬೀಳುತ್ತದೆ.
ವಿದ್ಯಾಪೀಠದಲ್ಲಿ ಕೃಷ್ಣನ ಸನ್ನಿಧಾನದ ಪಕ್ಕದಲ್ಲೇ ಶ್ರೀಗಳ ವೃಂದಾವನ..!
ಸದ್ಯಕ್ಕೆ ಇದು ತಾತ್ಕಾಲಿಕ ಬೃಂದಾವನವಾಗಿದ್ದು, ಒಂದೆರಡು ತಿಂಗಳ ನಂತರ ತಿಥಿ ಗೊತ್ತುಮಾಡಿ, ವ್ಯವಸ್ಥಿತವಾಗಿ ರೂಪಿಸಿದ ಕಲ್ಲಿನ ಬೃಂದಾವನವನ್ನು ಈ ಸ್ಥಳದಲ್ಲಿ ಪ್ರತಿಷ್ಠಾಪಿಸಲಾಗುವುದು. ಪೇಜಾವರ ಶ್ರೀಗಳ ಶಿಷ್ಯರಾದ ವಿದ್ಯಾಪೀಠದ ಪ್ರಾಧ್ಯಾಪಕ ಕೃಷ್ಣರಾಜ ಕುತ್ಪಾಡಿ ಅವರ ನೇತೃತ್ವದಲ್ಲಿ ಶ್ರೀಗಳ ವೃಂದಾವಸ್ಥ ಕಾರ್ಯ ನೆರವೇರಿತು. ಒಟ್ಟಿನಲ್ಲಿ ತಮ್ಮ ಪರಮಪ್ರಿಯ ದೇವರಾದ ಶ್ರೀಕೃಷ್ಣರ ಸನ್ನಿಧಾನದ ಪಕ್ಕದಲ್ಲೇ ಪೇಜಾವರ ಶ್ರೀಗಳು ವೃಂದಾವನಸ್ತರಾಗಿದ್ಧಾರೆ
ಮಹಾಯತಿಯ ನಿಧನಕ್ಕೆ ಗಣ್ಯರ ಸಂತಾಪ
ಪ್ರಧಾನಿ ಮೋದಿ: ಪೇಜಾವರ ಶ್ರೀಗಳ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಟ್ವೀಟ್ ಮಾಡುವ ಮೂಲಕ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯಿಂದ ಕಲಿಯಲು ಅನೇಕ ಅವಕಾಶಗಳು ದೊರೆತಿರುವುದು ನನಗೆ ಸಿಕ್ಕ ಆಶೀರ್ವಾದ ಎಂದು ಭಾವಿಸುತ್ತೇನೆ ಎಂದಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಂತಾಪ: ಪೇಜಾವರ ಶ್ರೀಗಳ ನಿಧನಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಂತಾಪ ಸೂಚಿಸಿದ್ದಾರೆ. ಟ್ವಿಟ್ಟರ್ನಲ್ಲಿ ಸಂತಾಪ ವ್ಯಕ್ತಪಡಿಸಿರುವ ಶಾ, ಶ್ರೀಗಳ ನಿಧನ ಅಪಾರ ನೋವು ತಂದಿದೆ. ಅವರು ಮಾನವೀಯತೆ, ದಯೆ ಹಾಗೂ ಜ್ಞಾನದ ಸಾರಾಂಶವಾಗಿದ್ದವರು. ಸಮಾಜದ ಕಲ್ಯಾಣಕ್ಕಾಗಿ ಅವರ ನಿಸ್ವಾರ್ಥ ಸೇವೆ ಅಪಾರ ಎಂದಿದ್ದಾರೆ.
ಸಿಎಂ ಬಿಎಸ್ವೈ ಸಂತಾಪ: ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರ ನಿಧನಕ್ಕೆ ಸಿಎಂ ಬಿಎಸ್ವೈ ಸಂತಾಪ ಸೂಚಿಸಿದ್ದಾರೆ. ಉಡುಪಿ ಶ್ರೀ ಕೃಷ್ಣಮಠದಲ್ಲಿ ಪೇಜಾವರ ಶ್ರೀಗಳ ಅಂತಿಮ ದರ್ಶನ ಪಡೆದ ಬಿ.ಎಸ್ ಯಡಿಯೂರಪ್ಪ ಪೇಜಾವರ ಸ್ವಾಮೀಜಿಗಳನ್ನು ಕಳೆದುಕೊಂಡು ದೇಶ ಬಡವಾಗಿದೆ ಎಂದರು.
ಸಿದ್ದರಾಮಯ್ಯ ಸಂತಾಪ: ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರ ಅಗಲಿಕೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಟ್ವಿಟ್ಟರ್ನಲ್ಲಿ ಸಂತಾಪ ವ್ಯಕ್ತಪಡಿಸಿರುವ ಅವರು, ಹಿಂದೂ ಧರ್ಮದ ಸುಧಾರಣೆಗೆ ಅವಿರತವಾಗಿ ಪ್ರಯತ್ನ ಮಾಡುತ್ತಾ ಬಂದ ಶ್ರೀಗಳ ನಿಧನ ನೋವು ತಂದಿದೆ ಎಂದಿದ್ದಾರೆ.
ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸಂತಾಪ: ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಕೂಡಾ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ್ದು, ಪರಮಪೂಜ್ಯ ಉಡುಪಿ ಪೇಜಾವರ ಮಠಾಧೀಶರಾದ ವಿಶ್ವೇಶತೀರ್ಥ ಶ್ರೀಪಾದಂಗಳವರ ನಿಧನಕ್ಕೆ ತೀವ್ರ ಕಂಬನಿ ಮಿಡಿಯುತ್ತೇನೆ. ಸದಾ ಜೀವನೋತ್ಸಾಹದ ಚಿಲುಮೆಯಂತಿದ್ದ ಶ್ರೀ ಗಳು ಸಮಾಜಮುಖಿ ನಿಲುವಿನ ಶ್ರೇಷ್ಠ ಸಂತರಾಗಿದ್ದರು. ಸಮಾಜಕ್ಕೆ ಮಾರ್ಗದರ್ಶಕರಾಗಿದ್ದ ಶ್ರೀಗಳ ನಿಧನದಿಂದ ನಾಡು ಬಡವಾಗಿದೆ ಎಂದು ಟ್ವಿಟ್ ಮಾಡಿದ್ದಾರೆ.
ರಾಜ್ಯದೆಲ್ಲೆಡೆ ದಲಿತ ಕೇರಿಗಳಲ್ಲಿ ಶ್ರೀಗಳ ಹೆಜ್ಜೆ ಗುರುತು..!
ಪೇಜಾವರ ಶ್ರೀಗಳು ಇನ್ನಿಲ್ಲ ಎಂಬ ಸುದ್ದಿ ಹೊರಬಿದ್ದಿದ್ದೇ ತಡ, ನಾಡಿನಾದ್ಯಂತ ಹಲವು ಜಿಲ್ಲೆಗಳ ದಲಿತ ಕೇರಿಗಳಲ್ಲಿ ಶ್ರೀಗಳ ನೆನಪು ಹಸಿರಾಯಿತು! ಕಳೆದ 50 ವರ್ಷಗಳಿಂದ ಹರಿಜನ ಕೇರಿಗಳಲ್ಲಿ ಹೆಜ್ಜೆಯಿಟ್ಟು ಅಸ್ಪೃಷ್ಯತೆ ನಿವಾರಣೆಗೆ ಶ್ರಮಿಸಿದ್ದ ಶ್ರೀಗಳ ನೆನಪು, ಜನ ಮಾನಸದಲ್ಲಿ ಇಂದಿಗೂ ನಿತ್ಯ ನೂತನ..!