ಗಡಿನಾಡಲ್ಲಿ ಶಿವಸೇನೆ ಪುಂಡಾಟಿಕೆ,ಶ್ರೀಮನ್ನಾರಾಯಣ ಚಿತ್ರ ಪ್ರದರ್ಶನಕ್ಕೆ ಅಡ್ಡಿ;ಕರವೇ ಆಕ್ರೋಶ

ಸಂಕೇಶ್ವರ: ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿ ಶಿವಸೇನೆ ಕಾರ್ಯಕರ್ತರು ರವಿವಾರ ಕೂಡಾ ತಮ್ಮ ಪುಂಡಾಟಿಕೆಯನ್ನು ಮುಂದೆವರೆಸಿದ್ದು, ಕೊಲ್ಲಾಪುರ ನಗರದಲ್ಲಿನ ಕೆಲವು ಅಂಗಡಿಗಳ ಮೇಲಿದ್ದ ಕನ್ನಡ ನಾಮಫಲಕಗಳಿಗೆ ಮಸಿ ಎರಚಿ, ಕರ್ನಾಟಕದ ಸಿಎಂ ಯಡಿಯೂರಪ್ಪ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ನವನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ ಎಂಇಎಸ್‌ ಹಾಗೂ ಶಿವಸೇನೆ ನಾಯಕರ ವಿರುದ್ಧ ನೀಡಿದ್ದ ವಿವಾದಾತ್ಮಕ ಹೇಳಿಕೆ ಗಡಿ ಭಾಗದಲ್ಲಿ ತೀವ್ರ ಪ್ರತಿಭಟನೆಗೆ ಕಾರಣವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಎರಡೂ ಗಡಿ ಪ್ರದೇಶದಲ್ಲಿ 220 ರಾಜ್ಯ ರಸ್ತೆ ಸಾರಿಗೆ ಬಸ್‌ ಸಂಚಾರ ರವಿವಾರ ಸಂಜೆಯವರೆಗೆ ಸ್ಥಗಿತಗೊಳಿಸಲಾಗಿತ್ತು.

ಮಹಾರಾಷ್ಟ್ರದಲ್ಲಿ ಶಿವಸೇನೆ ಹಾಗೂ ಕರ್ನಾಟಕದ ಗಡಿ ಭಾಗ ಬೆಳಗಾವಿ ಜಿಲ್ಲೆಯಲ್ಲಿ ಕನ್ನಡ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಈ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ಗಡಿಯಲ್ಲಿ ಓಡಾಡುವ ಬಸ್‌ಗಳನ್ನು ಬಂದ್‌ ಮಾಡಲಾಗಿದ್ದು, ಪ್ರಯಾಣಿಕರು ಪರದಾಡಬೇಕಾಯಿತು.

ನಿಪ್ಪಾಣಿ ಗಡಿ ಭಾಗದ ಕೊನಗೊಳ್ಳಿ ಚೆಕ್‌ಪೋಸ್ಟ್‌ ಬಳಿ ಕರ್ನಾಟಕ ಹಾಗೂ ಮಹಾರಾಷ್ಟ್ರದ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಇದರಿಂದ ಬೆಳಗಾವಿ ಹಾಗೂ ಚಿಕ್ಕೋಡಿ ವಿಭಾಗೀಯ ಘಟಕದಿಂದ ಯಾವುದೇ ಬಸ್‌ ಸಂಚಾರ ಇರಲಿಲ್ಲ. ಆದರೆ ಸಂಜೆ 4 ಗಂಟೆಯ ನಂತರ ಎಂದಿನಂತೆ ಬಸ್‌ ಸಂಚಾರ ಆರಂಭಿಸಲಾಯಿತು. ಈಗ ಯಾವುದೇ ಸಮಸ್ಯೆ ಇಲ್ಲ ಎಂದು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಆರ್‌. ಮುಂಜಿ ಹೇಳಿದರು.

ಚಿತ್ರಪ್ರದರ್ಶನ ರದ್ದು: ಈ ಮಧ್ಯೆ ಕೊಲ್ಲಾಪುರದಲ್ಲಿ ಪ್ರದರ್ಶನವಾಗುತ್ತಿದ್ದ ಕನ್ನಡ ಚಿತ್ರ ಶ್ರೀಮನ್ನಾರಾಯಣ ಚಿತ್ರಕ್ಕೆ ಗಡಿ ವಿವಾದದ ಪ್ರತಿಭಟನೆಯ ಬಿಸಿ ತಟ್ಟಿದೆ. ಕೊಲ್ಲಾಪುರದ ಅಪ್ಸರಾ ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿದ್ದ ಚಿತ್ರಕ್ಕೆ ಶಿವಸೇನೆ ಕಾರ್ಯಕರ್ತರು ತಡೆಯೊಡ್ಡಿ ಚಿತ್ರ ಪ್ರದರ್ಶನ ರದ್ದಾಗುವಂತೆ ಮಾಡಿದ್ದಾರೆ.

ಬೆಳಿಗ್ಗೆ ಚಿತ್ರಮಂದಿರದ ಮುಂದೆ ಪ್ರತಿಭಟನೆ ನಡೆಸಿದ ಶಿವಸೇನೆ ಕಾರ್ಯಕರ್ತರು ನಂತರ ಒಳಗಡೆ ಪ್ರವೇಶ ಮಾಡಿ ಕೂಡಲೇ ಪ್ರದರ್ಶನ ನಿಲ್ಲಿಸುವಂತೆ ಗಲಾಟೆ ಆರಂಭಿಸಿದ್ದಾರೆ. ತಕ್ಷಣ ಚಿತ್ರಮಂದಿರ ಮಾಲೀಕರು ಚಿತ್ರ ಪ್ರದರ್ಶನ ರದ್ದು ಮಾಡಿದ್ದಾರೆ. ಇದಕ್ಕೆ ಕನ್ನಡ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿವೆ.

ಗಡಿಭಾಗದಲ್ಲಿ ಪೊಲೀಸರ ಬಂದೋಬಸ್ತ್:
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಹೊರ ವಲಯದ ಮಹಾರಾಷ್ಟ್ರ ಗಡಿಯಲ್ಲಿರುವ ಕೂಗನೊಳ್ಳಿ ಟೋಲ್‌ ಬಳಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಬಸ್‌ ಸಂಚಾರ ಸ್ಥಗಿತದಿಂದ ಮಹಾರಾಷ್ಟ್ರ ರಾಜ್ಯಕ್ಕೆ ತೆರಳುವ ಖಾಸಗಿ ವಾಹನದಾರರಿಂದ ಹೆಚ್ಚಿಗೆ ಹಣ ವಸೂಲಿ ಮಾಡುತ್ತಿದ್ದು ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ