ಪೌರತ್ವ ತಿದ್ದುಪಡಿ ಕಾಯ್ದೆ- ಕೇಂದ್ರ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಮುಂದುವರೆದ ಆರೋಪ ಮತ್ತು ಪ್ರತ್ಯಾರೋಪ

ರಾಂಚಿ, ಡಿ.29-ಪೌರತ್ವ ತಿದ್ದುಪಡಿ ಕಾಯ್ದೆ ವಿಷಯದಲ್ಲಿ ಕೇಂದ್ರ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಪರಸ್ಪರ ಆರೋಪ ಮತ್ತು ಪ್ರತ್ಯಾರೋಪಗಳು ಮುಂದುವರೆದಿವೆ.

ನುಸುಳುಕೋರರ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಪ್ರೀತಿಯಿದ್ದರೆ, ಅವರನ್ನು ಇಟಲಿಗೆ ಕರೆದೊಯ್ಯಲಿ ಎಂದು ಕೇಂದ್ರ ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.

ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪೌರತ್ವ ಕಾಯ್ದೆ ಕುರಿತಂತೆ ಇಲ್ಲ ಸಲ್ಲದ ಗೊಂದಲಗಳನ್ನು ಸೃಷ್ಟಿಸಿ ದೇಶವನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿವೆ. ರಾಹುಲ್ ಗಾಂಧಿಯವರಿಗೆ ನುಸುಳುಕೋರರ ಮೇಲೆ ಪ್ರೀತಿ ಇರುವುದೇ ಆದರೆ, ಇಟಲಿಗೆ ಕರೆದುಕೊಂಡು ಹೋಗಲಿ ಎಂದು ವ್ಯಂಗ್ಯವಾಡಿದ್ದಾರೆ.

ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ಪೌರತ್ವ ಮಸೂದೆ ಬಗ್ಗೆ ಮಾತುಕತೆ ನಡೆಸಿದ್ದರು. ಆದರೆ, ಓಲೈಕೆಯ ರಾಜಕೀಯದಿಂದ ಅದನ್ನು ಮುಂದುವರೆಸಿರಲಿಲ್ಲ. ಇದೀಗ ಅದೇ ಕಾಂಗ್ರೆಸ್ ಸುಳ್ಳುಗಳನ್ನು ದೇಶವನ್ನು ಒಡೆಯಲು ಬಯಸುತ್ತಿದೆ ಎಂದು ಆರೋಪಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ನೋಟು ಅಮಾನ್ಯಕ್ಕಿಂತಲೂ ಅತ್ಯಂತ ಅಪಾಯಕಾರಿ ಎಂದು ನಿನ್ನೆಯಷ್ಟೇ ರಾಹುಲ್ ಗಾಂಧಿ ಟೀಕಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ