ಬೆಂಗಳೂರು, ಡಿ.30- ಹೊಸ ವರ್ಷದಲ್ಲಿ ಮಧ್ಯಪಾನ ಮಾಡಿ ವಾಹನ ಚಲಾಯಿಸದಂತೆ ಸಾರ್ವಜನಿಕರಿಗೆ ಮನವಿ ಮಾಡಲು ರಾಕಿಂಗ್ ಸ್ಟಾರ್ ಯಶ್ ನಗರ ಪೋಲೀಸರ ಪ್ರಚಾರ ರಾಯಭಾರಿಯಾಗಿದ್ದಾರೆ.
ಹೊಸ ವರ್ಷದ ಸಂದರ್ಭದಲ್ಲಿ ಸುರಕ್ಷತೆಗಾಗಿ ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲು ನಗರ ಪೋಲೀಸ್ ಆಯುಕ್ತ ಭಾಷ್ಕರ್ ರಾವ್ ಅವರು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಯಶ್, ಕುಡಿದು ವಾಹನ ಚಲಾಯಿಸಿ ಪ್ರಾಣಕ್ಕೆ ಕುತ್ತು ತಂದುಕೊಳ್ಳಬಾದೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ನಗರ ಪೋಲೀಸರ ಪ್ರಚಾರದ ರಾಯಬಾರಿಯಾಗಿ ವಿಡಿಯೋ ಮತ್ತು ಆಡಿಯೋ ಮೂಲಕ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿರುವ ಯಶ್, ಪೋಲೀಸರ ಜೊತೆ ಸಹಕರಿಸಿ ಬೆಂಗಳೂರನ್ನು ಸುರಕ್ಷಿತಗೊಳಿಸಿ ಎಂದು ಸಂದೇಶ ಸಾರಿದ್ದಾರೆ.
ಹೊಸ ವರ್ಷದ ಸಂಭ್ರಮದಲ್ಲಿ ಮದ್ಯ ಪಾನ ಮಾಡಿ ವಾಹನ ಚಲಾಯಿಸುವ ಸಂದರ್ಭದಲ್ಲಿ ಮನೆಯಲ್ಲಿ ತಮಗಾಗಿ ತಂದೆತಾಯಿ, ಅಕ್ಕತಂಗಿ, ಪತ್ನಿ, ಮಕ್ಕಳು ಕಾಯುತ್ತಿರುತ್ತಾರೆ ಎಂಬುದನ್ನು ಸ್ಮರಿಸಿಕೊಳ್ಳುವಂತೆ ಯಶ್ ಮನವಿ ಮಾಡಿದ್ದಾರೆ.
ಪೋಲೀಸರು ನಾಗರೀಕರ ರಕ್ಷಣೆಗಾಗಿ ದುಡಿಯುತ್ತಿದ್ದಾರೆ, ಅವರೊಂದಿಗೆ ಸಹಕರಿಸೋಣ ಎಂದು ಅವರು ಕೋರಿದ್ದಾರೆ.