ಹೊಸ ವರ್ಷದ ಆಚರಣೆ ಹಿನ್ನಲೆ- ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ಕ್ರಮ-ಪೋಲೀಸ್ ಆಯುಕ್ತ ಭಾಸ್ಕರ್‍ರಾವ್

ಬೆಂಗಳೂರು, ಡಿ.30- ಈ ಬಾರಿ ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅತ್ಯಾಧುನಿಕ ಸಲಕರಣೆಗಳನ್ನು ಬಳಸಿ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದ್ದು, ಕಾನೂನು ಮೀರುವವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವುದಾಗಿ ನಗರ ಪೋಲೀಸ್ ಆಯುಕ್ತ ಭಾಸ್ಕರ್‍ರಾವ್ ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರಕ್ಷತಾ ದೃಷ್ಟಿಯಿಂದ ಕೆಲವು ನಿಯಮಗಳನ್ನು ಕಠಿಣವಾಗಿ ಪಾಲಿಸಲು ಪೋಲೀಸರು ಮುಂದಾಗಿದ್ದಾರೆ. ಸಾರ್ವಜನಿಕರು ಕೂಡ ಸಹಕರಿಸಬೇಕು ಎಂದು ಮನವಿ ಮಾಡಿದರು.

ಪ್ರತಿ ವರ್ಷದಂತೆ ಈ ವರ್ಷವೂ ಎಂ.ಜಿ.ರಸ್ತೆ, ಬ್ರಿಗೆಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೆಂಟ್ ಮಾರ್ಕ್ ರಸ್ತೆ, ಚರ್ಚ್ ಸ್ಟ್ರೀಟ್‍ಗಳಲ್ಲಿ ಸಾಮೂಹಿಕವಾಗಿ ಹೊಸ ವರ್ಷದ ಆಚರಣೆ ನಡೆಯಲಿದೆ. ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನತೆ ಭಾಗವಹಿಸುತ್ತಾರೆ. ಸುರಕ್ಷತೆಯ ದೃಷ್ಟಿಯಿಂದ ಎರಡೂವರೆ ಸಾವಿರಕ್ಕೂ ಹೆಚ್ಚು ಪೋಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಈ ರಸ್ತೆಗಳಲ್ಲಿ 1500ಕ್ಕೂ ಹೆಚ್ಚು ಅತ್ಯಾಧುನಿಕ ಸಿಸಿ ಟಿವಿಗಳನ್ನು ಅಳವಡಿಸಲಾಗಿದೆ ಎಂದು ವಿವರಿಸಿದರು.

ಡಿ.31ರಂದು ಸಂಜೆ 4ರಿಂದ ರಾತ್ರಿ 9.30ಗಂಟೆವರೆಗೆ, ರಾತ್ರಿ 2ರಿಂದ ಮರುದಿನ ಬೆಳಗ್ಗೆ 8 ಗಂಟೆವರೆಗೆ ಎರಡು ಪಾಳಯದಲ್ಲಿ ಭದ್ರತೆ ಕೈಗೊಳ್ಳಲಾಗಿದೆ. ನಗರದ ಎಲ್ಲಾ ಡಿಸಿಪಿಗಳು ಗಸ್ತಿನಲ್ಲಿರುತ್ತಾರೆ. ಇಬ್ಬರು ಹೆಚ್ಚುವರಿ ಪೋಲೀಸ್ ಆಯುಕ್ತರು ಸಹ ಗಸ್ತಿನಲ್ಲಿದ್ದು, ಭದ್ರತೆಯ ನಿಗಾ ವಹಿಸಲಿದ್ದಾರೆ. ಇಡೀ ರಾತ್ರಿ ಹೊಯ್ಸಳ, ಚೀತಾ ಗಸ್ತಿನಲ್ಲಿರುತ್ತವೆ ಎಂದು ತಿಳಿಸಿದರು.

ರಕ್ಷಣಾ ದ್ವೀಪ:
ಯುವತಿಯರು, ಮಹಿಳೆಯರು ಅಪರಿಚಿತರ ಜತೆ ಯಾವುದೇ ಕಾರಣಕ್ಕೂ ಮದ್ಯಪಾನ ಮಾಡಬಾರದು ಎಂದು ಭಾಸ್ಕರ್‍ರಾವ್ ಮನವಿ ಮಾಡಿದ್ದಾರೆ.

ಅತಿ ಹೆಚ್ಚು ಜನ ಸೇರಿ ಹೊಸ ವರ್ಷ ಆಚರಣೆ ಮಾಡುವ ಸ್ಥಳಗಳಲ್ಲಿ ರಕ್ಷಣಾ ದ್ವೀಪ ರಚನೆ ಮಾಡಲಾಗುವುದು. ಅಲ್ಲಿ ಕುಳಿತುಕೊಳ್ಳಲು ಆಸನ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಆ ದ್ವೀಪದಿಂದಲೇ ಓಲಾ, ಊಬರ್ ಕ್ಯಾಬ್ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ. ಅಲ್ಲಿಂದ ತೆರಳಬೇಕಾಗಿರುವ ಸ್ಥಳಗಳಿಗೆ ಕ್ಯಾಬ್ ಮೂಲಕ ಹೋಗಬಹುದು. ಆಟೋ ಚಾಲಕರು ಕೂಡ ಪ್ರಯಾಣಿಕರು ಕರೆದ ಸ್ಥಳಕ್ಕೆ ಹೋಗಬೇಕು, ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಮೀಷನರ್ ಎಚ್ಚರಿಕೆ ನೀಡಿದ್ದಾರೆ.

ಯುವಜನರು ಮೇಲು ಸೇತುವೆಗಳ ಮೇಲೆ ವ್ಹೀಲಿಂಗ್, ಡ್ರಾಗ್‍ರೇಸ್, ಅತಿ ವೇಗದ ಚಾಲನೆ ಮಾಡಿ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಾರೆ. ಅದನ್ನು ತಪ್ಪಿಸಲು ಮೇಲ್ಸೇತುವೆಗಳ ಮೇಲಿನ ಸಂಚಾರವನ್ನು ಹೊಸ ವರ್ಷದ ಮುನ್ನಾದಿನ ರಾತ್ರಿ ನಿಷೇಧಿಸಲಾಗಿದೆ ಎಂದರು.

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ನಗರದಾದ್ಯಂತ ವಿಶೇಷ ತಪಾಸಣೆ ಮಾಡಿಸಲು ಸಂಚಾರ ವಿಭಾಗದ ಪೋಲೀಸರಿಗೆ ಸೂಚಿಸಲಾಗಿದೆ. ಆದಷ್ಟು ಖಾಸಗಿ ವಾಹನಗಳನ್ನು ಬಳಸದೆ, ಸಾರ್ವಜನಿಕ ಸಾರಿಗೆಯಲ್ಲಿ ಸಂಚಾರ ಮಾಡುವಂತೆ ಮನವಿ ಮಾಡುತ್ತಿದ್ದು, ಕುಡಿದು ಯಾವುದೇ ಕಾರಣಕ್ಕೂ ವಾಹನ ಚಾಲನೆ ಮಾಡಬೇಡಿ ಎಂದು ಸೂಚನೆ ನೀಡಿದರು.

ವಾಹನಗಳ ನಿಷೇಧ:
ಎಂ.ಜಿ.ರಸ್ತೆ, ಬ್ರಿಗೆಡ್ ರಸ್ತೆ, ಚರ್ಚ್ ಸ್ಟ್ರೀಟ್, ಮ್ಯೂಜಿಯಂ ರಸ್ತೆ, ರೆಸ್ಟ್‍ಹೌಸ್ ರಸ್ತೆ, ರೆಸಿಡೆನ್ಸಿ ಕ್ರಾಸ್ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.

ಮಡಿವಾಳದಿಂದ ಎಲೆಕ್ಟ್ರಾನಿಕ್‍ಸಿಟಿವರೆಗಿನ ಮೇಲ್ಸೇತುವೆ, ಮೈಕೋಲೇಔಟ್‍ನ ಡೈರಿ ವೃತ್ತ ಹಾಗೂ ಜಯದೇವ ಆಸ್ಪತ್ರೆ ಬಳಿ ಇರುವ ಮೇಲ್ಸೇತುವೆ, ದೇವರಬಿಸನಹಳ್ಳಿ ಮೇಲ್ಸೇತುವೆ, ಕಾಡುಗೋಡಿ ಮೇಲ್ಸೇತುವೆ, ಒಪೋ ಫಾರಂ, ಸರ್ಜಾಪುರ ಮೇಲ್ಸೇತುವೆ, ಎಚ್.ಎಸ್.ಆರ್.ಲೇಔಟ್‍ನ ಅಗರ, ಇಗ್ಲೂರು, ಬೆಳ್ಳಂದೂರು, ಇಂದಿರಾನಗರ ನೂರು ಅಡಿ ರಸ್ತೆಯ ಮೇಲ್ಸೇತುವೆ, ದೊಮ್ಮಲೂರು ಮೇಲ್ಸೇತುವೆ, ಕೆ.ಆರ್.ಪುರಂ ಬಳಿಯ ಎಂಎಂ ಟೆಂಪಲ್ ಬ್ರಿಡ್ಜ್, ಎಂ.ಡಿ.ಪುರ ಬ್ರಿಡ್ಜ್, ದೊಡ್ಡನೆಕ್ಕುಂದಿ ಬ್ರಿಡ್ಜ್, ಮೇಡಳ್ಳಿ ಬ್ರಿಡ್ಜ್, ಐಟಿಸಿ ಮೇಲ್ಸೇತುವೆ, ಲಿಂಗರಾಜಪುರ ಮೇಲ್ಸೇತುವೆ, ಕಲ್ಯಾಣನಗರ, ನಾಗವಾರ, ಐಒಸಿ, ಹೆಣ್ಣೂರು, ರಿಚ್‍ಮಂಡ್ ರಸ್ತೆ, ಆನಂದ್‍ರಾವ್ ವೃತ್ತ, ಕೆ.ಆರ್.ಮಾರುಕಟ್ಟೆಯ ಬಾಲಗಂಗಾಧರನಾಥ ಸ್ವಾಮಿ ಮೇಲ್ಸೇತುವೆಗಳ ಮೇಲೆ ಸಂಚಾರವನ್ನು ನಿಷೇಧಿಸಲಾಗಿದೆ ಎಂದರು.

ತುಮಕೂರು ರಸ್ತೆಯ ಮೇಲ್ಸೇತುವೆ, ಲಗ್ಗೆರೆ ರಿಂಗ್ ರಸ್ತೆ ಮೇಲ್ಸೇತುವೆ, ವಿಮಾನ ನಿಲ್ದಾಣದ ಉದ್ದಕ್ಕೂ ಬರುವ ಮೇಲ್ಸೇತುವೆಯ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಮಾರ್ಗ ಬದಲಾವಣೆ:
ಎಂ.ಜಿ.ರಸ್ತೆಯಲ್ಲಿ ಕ್ವೀನ್ಸ್ ವೃತ್ತದ ಕಡೆಯಿಂದ ಹಲಸೂರು ಹಾಗೂ ಇನ್ನು ಮುಂದಕ್ಕೆ ಹೋಗುವ ವಾಹನಗಳು ಅನಿಲ್‍ಕುಂಬ್ಳೆ ವೃತ್ತದ ಬಳಿ ಎಡ ತಿರುವು ಪಡೆದು ಸೆಂಟ್ರಲ್ ಸ್ಟ್ರೀಟ್, ಬಿಆರ್‍ವಿ ಜಂಕ್ಷನ್ ಬಲ ತಿರುವು ಪಡೆದು ಕಬ್ಬನ್ ರಸ್ತೆ ಮೂಲಕ ಸಂಚರಿಸಿ ವೆಬ್ಸ್ ಜಂಕ್ಷನ್ ಬಳಿ ಎಂ.ಜಿ.ರಸ್ತೆ ತಲುಪಿ ಮುಂದೆ ಸಾಗಬೇಕು.

ಟ್ರಿನಿಟಿ ವೃತ್ತದ ಕಡೆಯಿಂದ ಬರುವ ವಾಹನಗಳು ವೆಬ್ಸ್ ಜಂಕ್ಷನ್ ಬಳಿ ಬಲ ತಿರುವು ಪಡೆದು ಮಣಿಪಾಲ್ ಸೆಂಟರ್ ಬಳಿ ಬಲ ಎಡ ತಿರುವು ಪಡೆದು ಕಬ್ಬನ್ ರಸ್ತೆಯಲ್ಲಿ ಮುಂದೆ ಸಾಗಬೇಕು. ಹಲಸೂರು ಕಡೆಯಿಂದ ಕಂಟೋನ್ಮೆಂಟ್ ಕಡೆ ಹೋಗುವ ವಾಹನಗಳು ಟ್ರಿನಿಟಿ ವೃತ್ತದಲ್ಲಿ ಬಲ ತಿರುವು ಪಡೆದು ಹಲಸೂರು ರಸ್ತೆ, ಡಿಕನ್ಸನ್ ರಸ್ತೆ ಮಾರ್ಗವಾಗಿ ಕಬ್ಬನ್ ರಸ್ತೆ ಮೂಲಕ ಮುಂದೆ ಹೋಗಬೇಕು. ಸಂಚಾರಿ ಪೋಲೀಸರು ನಿಗದಿ ಮಾಡಿರುವ ಸ್ಥಳಗಳಲ್ಲೇ ಪಾರ್ಕಿಂಗ್ ಮಾಡಬೇಕೆಂದು ಆಯುಕ್ತರು ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ