ಅನಗತ್ಯವಾಗಿ ಕನ್ನಡಿಗರನ್ನು ಕೆರಳಿಸಿದರೆ ತಕ್ಕ ಪಾಠ- ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ

ಬೆಂಗಳೂರು, ಡಿ.30-ಶಿವಸೇನೆ ಹಿಂದುತ್ವ ಮತ್ತು ಮರಾಠಿ ಮುಖವಾಡ ಹಾಕಿಕೊಂಡಿದೆ. ಅಧಿಕಾರಕ್ಕೆ ಬಂದ ಮೇಲೆ ಹಿಂದುತ್ವ ಪಕ್ಕಕ್ಕೆ ಸರಿಸಿ, ಮರಾಠಿಗರನ್ನು ಸೆಳೆಯಲು ಮತ್ತೆ ಗಡಿ ತಂಟೆಗೆ ಕೈ ಹಾಕಿದೆ. ಅನಗತ್ಯವಾಗಿ ಕನ್ನಡಿಗರನ್ನು ಕೆರಳಿಸಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಎಚ್ಚರಿಸಿದ್ದಾರೆ.

ಮಹಾರಾಷ್ಟ್ರ -ಕರ್ನಾಟಕ ನಡುವಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾಜನ್ ವರದಿಯೇ ಅಂತಿಮ. ಮಹಾಜನ್ ಅವರು ಮಹಾರಾಷ್ಟ್ರದವರೇ. ಅವರು ನೀಡಿದ ವರದಿಯನ್ನು ಎರಡೂ ರಾಜ್ಯಗಳವರು ಒಪ್ಪಿಕೊಂಡು ದಶಕಗಳೇ ಕಳೆದಿವೆ. ಆದರೂ ಅನಗತ್ಯವಾಗಿ ಕ್ಯಾತೆ ತೆಗೆಯುವ ಇವರಿಗೆ ಕಾನೂನು, ಸಂವಿಧಾನದ ಮೇಲೆ ನಂಬಿಕೆ ಇದ್ದಂತಿಲ್ಲ. ಭಾವನೆಗಳನ್ನು ಕೆರಳಿಸಿ, ಬಾವುಟಗಳನ್ನು ಸುಟ್ಟು, ಪ್ರತಿಕೃತಿ ದಹಿಸಿ ನಮ್ಮ ಭಾಗವನ್ನು ಕಬಳಿಸಬಹುದೆಂದು ಏನಾದರೂ ತಿಳಿದಿದ್ದರೆ ಅದು ತಿರುಕನ ಕನಸು. ಇದನ್ನು ರಕ್ಷಣಾ ವೇದಿಕೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ನಾವು ಕಾನೂನಾತ್ಮಕ ಹೋರಾಟ ಹಾಗೂ ಸಂಘರ್ಷಕ್ಕೂ ಸಿದ್ಧರಿದ್ದೇವೆ.

ಇದನ್ನು ಶಿವಸೇನೆ ತಿಳಿದುಕೊಳ್ಳಬೇಕು. ಬೆಳಗಾವಿಯಲ್ಲಿ ಈಗಾಗಲೇ ನಾವು ಕನ್ನಡ ಧ್ವಜ ಹಾರಿಸಿದ್ದೇವೆ. ಮತ್ತೆ ಮತ್ತೆ ಕೆಣಕಿ ಮಂಗಳಾರತಿ ಮಾಡಿಸಿಕೊಳ್ಳಬೇಡಿ ಎಂದು ನಾರಾಯಣಗೌಡ ಎಚ್ಚರಿಸಿದ್ದಾರೆ.

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಒಂದಿಂಚು ಜಾಗ ಮಹಾರಾಷ್ಟ್ರಕ್ಕೆ ಸೇರಲು ಯಾವುದೇ ಕಾರಣಕ್ಕೂ ರಕ್ಷಣಾ ವೇದಿಕೆ ಬಿಡುವುದಿಲ್ಲ. ಇದಕ್ಕೆ ನಾವು ಯಾವ ತ್ಯಾಗಕ್ಕಾದರೂ ಸಿದ್ಧ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ