ರಮೇಶ್ ಜಾರಕಿಹೊಳಿ ಮರಾಠಿಗರ ಏಜೆಂಟರಂತೆ ವರ್ತಿಸಿದ್ದಾರೆ- ಅಧ್ಯಕ್ಷ ವಾಟಾಳ್ ನಾಗರಾಜ್

ಬೆಂಗಳೂರು, ಡಿ.30-ಬೆಳಗಾವಿ ಗ್ರಾಮೀಣ ಭಾಗದಲ್ಲಿ ಮರಾಠಿ ಮೂಲದವರು ಶಾಸಕರಾಗಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಕನ್ನಡಿಗರ ಸ್ವಾಭಿಮಾನ ಕೆಣಕಿರುವ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಬಿಜೆಪಿ ವಜಾ ಮಾಡಬೇಕೆಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

ಮಹಾರಾಷ್ಟ್ರ, ಕರ್ನಾಟಕ ಗಡಿ ವಿವಾದ ಮುಗಿದ ಅಧ್ಯಾಯವಾಗಿದೆ. ಈ ಸಂದರ್ಭದಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಶಿವಸೇನೆ, ಎಂಇಎಸ್‍ನವರು ಪದೇ ಪದೇ ಗಡಿ ವಿವಾದ ತೆಗೆಯುತ್ತಾರೆ. ಇಂತಹ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಮರಾಠಿಗರನ್ನು ಆಯ್ಕೆ ಮಾಡಬೇಕು, ಇಲ್ಲಿನ ಮರಾಠಿಗರು ಒಗ್ಗಟ್ಟಾಗಬೇಕು ಎಂದು ಹೇಳಿರುವ ರಮೇಶ್ ಜಾರಕಿ ಹೊಳಿ ಮರಾಠಿಗರ ಏಜೆಂಟರಂತೆ ವರ್ತಿಸಿದ್ದಾರೆ. ಅವರನ್ನು ಬಿಜೆಪಿ ಕೂಡಲೇ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಪುಂಡಾಟಿಕೆ ಮಾಡುವ ನಾಡಿನಲ್ಲಿರುವ ಎಂಇಎಸ್‍ನವರನ್ನು ಗಡಿ ಪಾರು ಮಾಡಬೇಕು. ಇಲ್ಲದಿದ್ದರೆ ಇಂತಹ ಚಟುವಟಿಕೆಗಳು ನಿಲ್ಲುವುದಿಲ್ಲ. ಈ ಸರ್ಕಾರಗಳಿಗೆ ಗಡಿ ನಾಡ ಬಗ್ಗೆ, ಗಡಿ ಸಮಸ್ಯೆಗಳ ಬಗ್ಗೆ ಕಾಳಜಿಯೇ ಇಲ್ಲ. ಯಾವುದೇ ಕಾರಣಕ್ಕೂ ಕಾರವಾರ, ನಿಪ್ಪಾಣಿ, ಬೆಳಗಾವಿಯ ಒಂದಿಂಚೂ ಜಾಗವನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಬಿಡುವುದಿಲ್ಲ. ನಾಳೆಯಿಂದ ಕನ್ನಡ ಚಳವಳಿ ವಾಟಾಳ್ ಪಕ್ಷದ ವತಿಯಿಂದ ಹೋರಾಟ ಆರಂಭಿಸುತ್ತೇವೆ. ಬೆಳಗಾವಿ ಗಡಿ ಭಾಗಕ್ಕೂ ಹೋಗಿ ಹೋರಾಟ ಮಾಡುತ್ತೇವೆ ಎಂದು ವಾಟಾಳ್ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ