ಅಂತಾರಾಷ್ಟ್ರೀಯ ಸಂಘಟನೆಗಳು ಛೀಮಾರಿ ಹಾಕಿ ಎಚ್ಚರಿಕೆ-ಆದರೂ ಉಗ್ರರೊಂದಿಗೆ ನಿಕಟ ಸಖ್ಯ ಮುಂದುವರಿಸಿರುವ ಪಾಕ್

ಕರಾಚಿ/ನವದೆಹಲಿ, ಡಿ.29-ಕುಖ್ಯಾತ ಭಯೋತ್ಪಾದಕರು ಮತ್ತು ಉಗ್ರಗಾಮಿ ಸಂಘಟನೆಗಳಿಗೆ ಸುರಕ್ಷಿತ ಆಶ್ರಯ ಕಲ್ಪಿಸುತ್ತಿರುವ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆ ಮತ್ತು ಆರ್ಥಿಕ ಕಾರ್ಯಪಡೆ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಸಂಘಟನೆಗಳು ಛೀಮಾರಿ ಹಾಕಿ ಎಚ್ಚರಿಕೆ ನೀಡಿದ್ದರೂ ಆ ದೇಶ ಉಗ್ರರೊಂದಿಗೆ ನಿಕಟ ಸಖ್ಯ ಮುಂದುವರಿಸಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಪಾಕಿಸ್ತಾನಿ ಸೇನಾ ಪಡೆಯ ಮುಖ್ಯ ವಕ್ತಾರ ಮೇಜರ್‍ಜನರ್ ಆಸೀಫ್ ಗಫೂರ್, ಕುಖ್ಯಾತ ಭಯೋತ್ಪಾದನೆ ಸಂಘಟನೆ ಜೈಷ್-ಎ-ಮಹಮದ್(ಜೆಇಎಂ) ಜೊತೆ ಆಪ್ತ ಸಂಬಂಧ ಹೊಂದಿರುವುದಕ್ಕೆ ಬಲವಾದ ಸಾಕ್ಷ್ಯಾಧಾರ ಲಭಿಸಿದೆ.

ಬಂದರು ನಗರಿ ಕರಾಚಿಯಲ್ಲಿರನ್ ಕುಪ್ರಸಿದ್ಧ ಜಾಮಿಯಾ ರಶಿದಿಯಾ ಮದರಸಾಗೆ ಡಿ.27ರಂದು ಮೇಜರ್ ಜನರಲ್ ಆಫಿಫ್ ಗಪೂರ್ ಭೇಟಿ ನೀಡಿ ಕುಖ್ಯಾತ ಉಗ್ರರೊಂದಿಗೆ ಇರುವ ಪೋಟೋಗಳು ಈಗ ಬಹಿರಂಗಗೊಂಡಿದೆ.

ಜೈಷ್ ಉಗ್ರರೊಂದಿಗೆ ಅತ್ಯಂತ ನಿಕಟ ಸಂಬಂಧ ಹೊಂದಿರುವ ಮದರಸಾಗೆ ಭೇಟಿ ನೀಡಿದ ಗಫೂರ್‍ಗೆ ಅಲ್ಲಿ ಭವ್ಯ ಸ್ವಾಗತ ಕೋರಲಾಯಿತು. ಇದು ಪಾಕಿಸ್ತಾನಿ ಸೇನೆ ಭಯೋತ್ಪಾದಕರ ಜತೆ ಹೊಂದಿರುವ ಸಂಬಂಧಕ್ಕೆ ದೊರೆತ ಮತ್ತೊಂದು ಸ್ಪಷ್ಟ ಪುರಾವೆಯಾಗಿದೆ.

ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನಿ ಸೇನೆಯ ಉನ್ನತಾಧಿಕಾರಿಗಳು ಮತ್ತು ಭಯೋತ್ಪಾದಕರ ನಡುವಣ ಸಂಬಂಧ ಮತ್ತಷ್ಟ ಬಲಗೊಂಡಿರುವ ಹಿನ್ನೆಲೆಯಲ್ಲಿ ಮುಂದೆ ಇಸ್ಲಾಮಾಬಾದ್‍ನಿಂದ ನಡೆಯಬಹುದಾದ ಕುತಂತ್ರ ಮತ್ತು ವಿಧ್ವಂಸಕ ದಾಳಿಗಳ ಸಾಧ್ಯತೆ ಹಿನ್ನೆಲೆಯಲ್ಲಿ ಭಾರತ ತೀವ್ರ ಕಟ್ಟೆಚ್ಚರ ವಹಿಸಿದೆ. ಅಲ್ಲದೇ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶದ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಖಲಿಸ್ತಾನ ಉಗ್ರಗಾಮಿಗಳು ಪಂಜಾಬ್, ಹರಿಯಾಣ ಮತ್ತುರಾಜಸ್ತಾನ ಸೇರಿದಂತೆ ವಿವಿಧೆಡೆ ಭಾರೀ ದಾಳಿಗಳನ್ನು ನಡೆಸಲು ಪಾಕಿಸ್ತಾನಿ ಭಯೋತ್ಪಾದಕರ ನೆರವು ಕೋರಿರುವ ಸಂದರ್ಭದಲ್ಲೇ ಇನ್ನೊಂದೆಡೆ ಪಾಕ್ ಸೇನೆ ಮತ್ತು ಉಗ್ರರು ಮಿಲಾವತ್ ಆಗಿರುವುದು ಆತಂಕಕಾರಿ ಸಂಗತಿಯಾಗಿದೆ.

ಇತ್ತೀಚೆಗೆ ರಾವಲ್ಪಿಂಡಿಯಲ್ಲಿ ಪಾಕ್ ಸೇನೆಯ ಉನ್ನತಾಧಿಕಾರಿಗಳ ಜೊತೆ ಉಗ್ರರು ಗೌಪ್ಯ ಸಭೆಯೊಂದನ್ನು ನಡೆಸಿ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದ್ದ ಸಂಗತಿಯನ್ನು ಗುಪ್ತಚರ ದಳಗಳು ಬಹಿರಂಗಗೊಳಿಸಿದ್ದವು.

ಒಂದೆಡೆ ವಿವಿಧ ಉಗ್ರಗಾಮಿ ಸಂಘಟನೆಗಳು, ಮತ್ತೊಂದೆಡೆ ಭಯೋತ್ಪಾದಕರಿಗೆ ಪಾಕಿಸ್ತಾನಿ ಸೇನೆಯ ನೇರ ನೆರವು ಹಾಗೂ ಇನ್ನೊಂದೆಡೆ ಖಲೀಸ್ತಾನಿ ಉಗ್ರರು ಭಾರತದ ಮೇಲೆ ವಕ್ರದೃಷ್ಟಿ ಬೀರಿರುವುದರಿಂದ ಭದ್ರತಾಪಡೆಗಳು ಭಾರೀ ಕಟ್ಟೆಚ್ಚರ ವಹಿಸಿದ್ದು, ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ