ಮಂಗಳೂರು: ಚಾರ್ಮಾಡಿ ಘಾಟ್ ರಸ್ತೆ ದುರಸ್ತಿ ಕಾಮಗಾರಿ ಹಿನ್ನೆಲೆ ಇಂದಿನಿಂದ ಘನ ವಾಹನಗಳ ಸಂಚಾರ ನಿಷೇಧ ಮಾಡಲಾಗಿದೆ. ಮಿನಿ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಕಾರು, ಮಿನಿ ಟೆಂಪೋ ಹಾಗೂ ಮಿನಿ ಕೆ.ಎಸ್.ಆರ್.ಟಿ.ಸಿ ಬಸ್ಗಳಿಗೆ ಮಾತ್ರ ಈ ರಸ್ತೆಯಲ್ಲಿ ಸಂಚರಿಸುವ ಅವಕಾಶ ಕಲ್ಪಿಸಲಾಗಿದೆ. ಘನ ವಾಹನಗಳಾದ ಟ್ಯಾಂಕರ್, ರಾಜಹಂಸ ಬಸ್ ಸೇರಿದಂತೆ ಇತರೆ ವಾಹನಗಳ ಸಂಚಾರ ನಿಷೇಧ ಮಾಡಲಾಗಿದೆ. ಮುಂದಿನ ಆದೇಶದವರೆಗೂ ಈ ವ್ಯವಸ್ಥೆ ಜಾರಿಯಲ್ಲಿದೆ.
ಮುಂದಿನ ಆದೇಶದವರೆಗೂ ಪರ್ಯಾಯ ರಸ್ತೆ ಮೂಲಕ ತೆರಳಲು ನಿರ್ದೇಶನ ನೀಡಲಾಗಿದೆ. ಕಾರ್ಕಳ-ಸಂಸೆ-ಕುದುರೆಮುಖ ರಸ್ತೆ ಮತ್ತು ಶಿರಾಡಿ ರಸ್ತೆಗ ಮೂಲಕ ಪ್ರಯಾಣಿಕರು ತೆರಳಲು ಅವಕಾಶ ಮಾಡಲಾಗಿದೆ. ಚಾರ್ಮಾಡಿ ಘಾಟ್ ಮಂಗಳೂರು-ಕಡೂರು ರಾಷ್ಟ್ರೀಯ ಹೆದ್ದಾರಿಯಲ್ಲಿದೆ.
ಈ ವರ್ಷ ಮಲೆನಾಡು ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಚಾರ್ಮಾಡಿ ಘಾಟ್ನಲ್ಲಿ ಪದೇ ಪದೇ ಭೂ ಕುಸಿತ ಉಂಟಾಗಿತ್ತು. ಹೀಗಾಗಿ ಆಗಸ್ಟ್ ತಿಂಗಳಿಂದ ಚಾರ್ಮಾಡಿ ಘಾಟ್ನಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಇದೀಗ ಸಾರ್ವಜನಿಕರ ಹಿತದೃಷ್ಟಿಯಿಂದ ಇಂದಿನಿಂದ ಮಿನಿ (ಲಘು) ವಾಹನಗಳ ಸಂಚಾರ ಆರಂಭವಾಗಿದೆ. ಆದರೆ ಯಾವುದೇ ಘನ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ.