ಬೆಂಗಳೂರು, ಡಿ.26- ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನದವರೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ನಗರಗಳು ಬಣಗುಡುತ್ತಿದ್ದವು.
ಇಂದು ಬೆಳಗ್ಗೆ 8 ರಿಂದ 11.15ರ ವರೆಗೆ ಸಂಭವಿಸಿದ ಸೂರ್ಯಗ್ರಹಣದಿಂದಾಗಿ ಬಹುತೇಕ ಅಂಗಡಿ-ಮುಗ್ಗಟ್ಟುಗಳು ಮುಚ್ಚಿದ್ದವು. ರಸ್ತೆಗಳು ಬಿಕೋ ಎನ್ನುತ್ತಿದ್ದವು.
ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಬಹಳಷ್ಟು ಮಂದಿ ಆತಂಕಕ್ಕೊಳಗಾಗಿದ್ದು, ಮನೆಯಿಂದ ಹೊರಬರಲಿಲ್ಲ. ನಿನ್ನೆ ಕ್ರಿಸ್ಮಸ್ ಹಿನ್ನೆಲೆಯಲ್ಲಿ ರಜೆ ಇತ್ತು. ಇಂದು ಅಮಾವಾಸ್ಯೆ ಜತೆಯಲ್ಲಿ ಸೂರ್ಯಗ್ರಹಣ ಏಕಕಾಲಕ್ಕೆ ಸಂಭವಿಸಿದ್ದರಿಂದ ಜನ ಮನೆಯಿಂದ ಹೊರಬರಲು ಹಿಂದೇಟು ಹಾಕಿದರು.
ಮಧ್ಯಾಹ್ನದವರೆಗೂ ಬೆಂಗಳೂರು ಖಾಲಿ ಖಾಲಿಯಾಗಿತ್ತು. ರಸ್ತೆಗಳಲ್ಲಿ ಸಂಚಾರ ವಿರಳವಾಗಿತ್ತು. ಬಿಎಂಟಿಸಿ ಬಸ್ಗಳನ್ನು ಹೊರತುಪಡಿಸಿ ಆಟೋ, ಖಾಸಗಿ ಟ್ಯಾಕ್ಸಿ ಸರ್ವೀಸ್ಗಳು ವಿರಳವಾಗಿದ್ದವು. ಅನಿವಾರ್ಯವಾಗಿ ಕಚೇರಿಗೆ ಹೋಗಬೇಕಾದವರು ಮಾತ್ರ ಮನೆಯಿಂದ ಹೊರಬಂದಿದ್ದರು. ಉಳಿದಂತೆ ಬಹಳಷ್ಟು ಮಂದಿ ಮನೆಯಲ್ಲೇ ಉಳಿದುಕೊಂಡಿದ್ದರು. ಬೆಂಗಳೂರಿನಲ್ಲಿ ಸದಾ ಗಿಜಿಗುಡುವ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಮಾರ್ಕೆಟ್, ಶಿವಾಜಿನಗರ, ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿ, ಯಶವಂತಪುರ, ಮೆಜಸ್ಟಿಕ್, ಕೆಜಿ ರಸ್ತೆ, ಹಳೆ ಮದ್ರಾಸ್ ರಸ್ತೆ, ಬಾಣಸವಾಡಿ, ಬನ್ನೇರುಘಟ್ಟ ರಸ್ತೆ, ಹೊಸೂರು ರಸ್ತೆ ಸೇರಿದಂತೆ ಬೆಂಗಳೂರಿನ ನಾನಾ ಭಾಗಗಳಲ್ಲಿ ಜನ ವಿರಳವಾಗಿದ್ದರು. ಅಂಗಡಿಗಳು ಮುಚ್ಚಿದ್ದರಿಂದಾಗಿ ವ್ಯಾಪಾರವೂ ಇರಲಿಲ್ಲ. ಹೊಟೇಲ್ಗಳು ಬಹುತೇಕ ಮುಚ್ಚಿದ್ದವು.
ಕ್ರಿಸ್ಮಸ್ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಇರುವುದರಿಂದ ಬಹಳಷ್ಟು ಮಂದಿ ಪ್ರವಾಸ ಹೋಗಿದ್ದರು. ಹೀಗಾಗಿ ಬೆಂಗಳೂರಿನಲ್ಲಿ ಜನಸಂಖ್ಯೆಯೂ ವಿರಳವಾಗಿತ್ತು. ಸಿನಿಮಾ ಮಂದಿರಗಳಲ್ಲೂ ಕೂಡ ಒಂದು ತಡವಾಗಿ ಪ್ರದರ್ಶನ ಆರಂಭಿಸಲಾಗಿದೆ. ಪ್ರಮುಖ ಶಾಪಿಂಗ್ ಮಾಲ್ಗಳು ಬಿಕೋ ಎನ್ನುತ್ತಿದ್ದವು.
ಗ್ರಹಣದ ವೇಳೆಯಲ್ಲಿ ಬಹುತೇಕ ದೇವಸ್ಥಾನಗಳು ಬಾಗಿಲು ಮುಚ್ಚಿದ್ದವು. ನಂತರ ವಿಶೇಷ ಪೂಜೆ ನಡೆಸಲಾಯಿತು. ಪೂಜೆಗೆ ಬಹಳಷ್ಟು ಮಂದಿ ಭಕ್ತರು ಆಗಮಿಸಿದ್ದರು.
ಕೆಲವು ಕಡೆ ಗ್ರಹಣ ವೀಕ್ಷಣೆಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ನೆಹರು ತಾರಾಲಯ, ಬೆಂಗಳೂರು ಮ್ಯೂಸಿಯಂ ಸೇರಿದಂತೆ ಹಲವಾರು ವೈಜ್ಞಾನಿಕ ಕೇಂದ್ರಗಳಲ್ಲಿ ಗ್ರಹಣ ವೀಕ್ಷಣೆಗೆ ದೂರದರ್ಶಕದ ವ್ಯವಸ್ಥೆ ಮಾಡಲಾಗಿತ್ತು. ಗ್ರಹಣದ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿತ್ತು.