ಕೆಪಿಸಿಸಿಗೆ ವಿನೂತನ ಸಾರಥಿಯಾಗಿ ಡಿ.ಕೆ.ಶಿವಕುಮಾರ್ ನೇಮಕ ಸಾಧ್ಯತೆ

ಬೆಂಗಳೂರು, ಡಿ.26-ಕೆಪಿಸಿಸಿಗೆ ವಿನೂತನ ಸಾರಥಿಯಾಗಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ನೇಮಿಸಿ ಸಂಜೆ ಒಳಗಾಗಿ ಹೈಕಮಾಂಡ್ ಆದೇಶ ಹೊರಡಿಸುವ ಸಾಧ್ಯತೆ ಇದೆ.

ಉಪಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ಹಾಲಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ, ಅವರನ್ನು ವರ್ಗಾವಣೆ ಮಾಡಬೇಕೆಂಬ ಬೇಡಿಕೆ ಕೂಡ ಕಾಂಗ್ರೆಸ್‍ನಲ್ಲಿ ಕೇಳಿ ಬಂದಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್, ಕೆ.ಎಚ್.ಮುನಿಯಪ್ಪ, ಕೃಷ್ಣಬೈರೇಗೌಡ, ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್ ಸೇರಿದಂತೆ ಹಲವರು ಮಂದಿಯ ಹೆಸರುಗಳು ಕೇಳಿಬಂದಿದ್ದವು.

ಜಾತಿ ಸಮೀಕರಣದ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್‍ಗೆ ಹೈಕಮಾಂಡ್ ಆದ್ಯತೆ ನೀಡುತ್ತಿದೆ ಎಂದು ಹೇಳಲಾಗುತ್ತಿದೆ. ಲಿಂಗಾಯತ ಸಮುದಾಯಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ, ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಸ್ಥಾನ ನೀಡಲಾಗಿದೆ. ಕುರುಬ ಸಮುದಾಯದಿಂದ ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕನಾಗಿದ್ದಾರೆ, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಕೂಡ ಹೈಕಮಾಂಡ್ ಮತ್ತೆ ಅವರನ್ನೇ ಮುಂದುವರಿಸಲು ಆಸಕ್ತಿ ತೋರಿಸಿದೆ.

ದಿನೇಶ್‍ಗುಂಡೂರಾವ್ ಅತ್ಯಂತ ಕಿರಿಯ ವಯಸ್ಸಿನವರಾಗಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಂಡು ಪಕ್ಷ ಸಂಘಟನೆ ನಡೆಸಲು ವಿಫಲರಾಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ, ಹೀಗಾಗಿ ಅವರನ್ನು ಬದಲಾವಣೆ ಮಾಡಿ ಪ್ರಭಾವಿಯಾಗಿರುವ ಒಕ್ಕಲಿಗ ಸಮುದಾಯಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವಂತೆ ಇತ್ತೀಚೆಗೆ ರಾಜ್ಯದಲ್ಲಿ ಅಭಿಪ್ರಾಯ ಸಂಗ್ರಹಿಸಿದ ಮಧುಸೂದನ್ ಮಿಸ್ತ್ರಿ ನೇತೃತ್ವದ ವೀಕ್ಷಕರ ತಂಡ ವರದಿ ನೀಡಿದೆ.

ಅದನ್ನು ಆಧರಿಸಿ ಇಂದು ಸಂಜೆ ಒಳಗಾಗಿಯೇ ಅಧಿಕೃತ ಪ್ರಕಟಣೆ ಹೊರಬೀಳುವ ನಿರೀಕ್ಷೆಗಳಿವೆ.ಬಹುತೇಕ ಸಂಕ್ರಾಂತಿ ಬಳಿಕ ಹೊಸ ನೇಮಕಾತಿಗಳು ನಡೆಯಲಿವೆ ಎಂದು ಹೇಳಲಾಗಿತ್ತು, ಆದರೆ ಡಿ.ಕೆ.ಶಿವಕುಮಾರ್ ನೇಮಕಾತಿಗೆ ಹೆಚ್ಚು ವಿರೋಧ ವ್ಯಕ್ತವಾಗದ ಹಿನ್ನೆಲೆಯಲ್ಲಿ ಹೊಸ ವರ್ಷಕ್ಕೂ ಮುನ್ನವೇ ನೇಮಕಾತಿ ಆದೇಶ ಹೊರಡಿಸಲು ತಯಾರಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಒಂದು ವೇಳೆ ಇಂದು ಸಂಜೆ ವೇಳೆಗೆ ಅಧಿಕೃತ ಪ್ರಕಟಣೆ ಹೊರ ಬೀಳದಿದ್ದರೆ ಸಂಕ್ರಾಂತಿ ಬಳಿಕ ಹೊಸ ನೇಮಕಾತಿಗಳಾಗಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ