ಬೆಂಗಳೂರು, ಡಿ.26-ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಮಾಲ್ಗುಡಿ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲು ಬಿನ್ನಿಪೇಟೆ ಬಳಿ ಹಳಿ ತಪ್ಪಿದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಮೈಸೂರಿನ ರೈಲ್ವೆ ನಿಲ್ದಾಣದಿಂದ ಬೆಳಗ್ಗೆ 8.15 ಗಂಟೆಗೆ ಬೆಂಗಳೂರು ಕಡೆಗೆ ಹೊರಟಿದ್ದ ರೈಲು ಕೆಂಗೇರಿ ನಿಲ್ದಾಣಕ್ಕೆ ತಲುಪಿ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಸಾಗುವ ಮಾರ್ಗ ಮಧ್ಯೆ ಬಿನ್ನಿಪೇಟೆ ಬಳಿ ಹಳಿ ತಪ್ಪಿದೆ.
ಲೋಕೋ ಪೈಲಟ್ (ರೈಲು ಚಾಲಕ) ಸಮಯ ಪ್ರಜ್ಞೆಯಿಂದಾಗಿ ಅನಾಹುತ ತಪ್ಪಿದ್ದು , ಇಂಜಿನ್ ಹಾಗೂ ಕೆಲವು ಬೋಗಿಗಳು ಹಳಿಯಿಂದ ಕೆಳಗೆ ಇಳಿದಿದ್ದು , ಅದನ್ನು ಸರಿಪಡಿಸಲು ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಘಟನೆಯಿಂದಾಗಿ ಮೈಸೂರು , ಚಾಮರಾಜನಗರ ಸೇರಿದಂತೆ ವಿವಿಧೆಡೆ ತೆರಳಬೇಕಾಗಿದ್ದ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.
ಕ್ರೇನ್ ತರಿಸಿ ರೈಲನ್ನು ಮೇಲೆತ್ತಲಾಗಿದ್ದು , ಹಳಿ ಸರಿಪಡಿಸಿ ಪರೀಕ್ಷೆ ನಡೆಸಿದ ನಂತರ ಮಧ್ಯಾಹ್ನ ಮತ್ತೆ ಪ್ರಯಾಣ ಆರಂಭಿಸಲಾಗಿದೆ.